ಕಲಬುರಗಿ: ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜೆ ಮಂಜೂರಾತಿಗೆ ಸಂಪುಟ ಸಭೆ ಅನುಮೋದನೆ ನೀಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಡಿಶಾ ಸರ್ಕಾರ 2024ರಲ್ಲಿ ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜಾ ಸೌಲಭ್ಯ ಜಾರಿಗೆ ತಂದಿದ್ದು, ಇದೆ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿಗೆ ತರಲು ಕಳೆದ ಜನವರಿ 10 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ರವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಮಿಕ ವರ್ಗದ ಸರ್ವ ಮಹಿಳಾ ನೌಕರರಿಗೆ ಈ ಯೋಜನೆ ಅನ್ವಯಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದರು.
ಇತ್ತಿಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮತ್ತು ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ವೇತನ ಸಹಿತ ಋತು ಚಕ್ರ ರಜೆ ಮಂಜೂರಾತಿಗೆ ಅನುಮೋದನೆ ನೀಡಿದ ಮುಖ್ಯಮಂತ್ರಿಗಳಿಗೆ ಮತ್ತು ಸಚಿವ ಸಂಪುಟದ ಸರ್ವ ಸಚಿವರಿಗೆ ಮತ್ತು ಈ ಸಂಬಂಧ ಅವಿರತ ಶ್ರಮ ವಹಿಸಿದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ರಾಜ್ಯದ 1 ಲಕ್ಷದ 80 ಸಾವಿರ ಮಹಿಳಾ ನೌಕರರು ತಿಂಗಳಿಗೆ ಒಂದು ದಿವಸ ವೇತನ ಸಹಿತ ರಜೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಈ ಸಂಬಂಧ ಅಧಿಕೃತ ಆದೇಶವನ್ನು ಸರ್ಕಾರ ಅತಿ ಶಿಘ್ರದಲ್ಲಿ ಹೊರಡಿಸಲಿದೆ. ಈ ಮಹತ್ತರವಾದ ಸರ್ಕಾರದ ನಿರ್ಧಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ಮತ್ತು ಪದಾಧಿಕಾರಿಗಳಾದ ಮಹೇಶ ಹೂಗಾರ, ಶ್ರೀಮಂತ ಪಟ್ಟೇದಾರ, ಧರ್ಮರಾಯ ಜವಳಿ, ಸುರೇಶ ಶರ್ಮಾ, ಚಂದ್ರಕಾಂತ ಏರಿ, ಎಂ.ಬಿ ಪಾಟೀಲ, ಸುರೇಶ ವಗ್ಗೆ ರವರು ಹರ್ಷ ವ್ಯಕ್ತ ಪಡಿಸಿದ್ದಾರೆ.