ಕಲಬುರಗಿ: ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಶರಣಬಸಪ್ಪ ಸುಬೇದಾರ್ ಸೇರಿ ಐವರು ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ನಗರ ಪೊಲೀಸ್ ಆಯುಕ್ತಾಲಯದ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಶರಣಬಸಪ್ಪ ಸುಬೇದಾರ್, ಅವರ ರೈಟರ್ ಚಂದ್ರಕಾಂತ್, ಕಾನ್ಸ್‌ಟೇಬಲ್ ರಾಘವೇಂದ್ರ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳು ಸೈಟ್ ವಿವಾದವೊಂದನ್ನು ಬಗೆಹರಿಸಲು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ 40 ಲಕ್ಷ ರೂ ಬೇಡಿಕೆ ಇಟ್ಟಿದ್ದರು, ಅದರಲ್ಲಿ ಮುಂಗಡವಾಗಿ 10 ಲಕ್ಷ ರೂ ಪಡೆದಿದ್ದರು.
ಉಳಿದ 30 ಲಕ್ಷಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು. ಈ ಕುರಿತು ರೇವಣಸಿದ್ದಯ್ಯ ಸ್ವಾಮಿ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, 30 ಲಕ್ಷ ಪಡೆಯುವಾಗ ಎಸಿಪಿ ಸುಬೇದಾರ್ ಮತ್ತು ಅವರ ತಂಡವನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಘಟನೆಯ ಸಂಬಂಧ ಐವರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.