ಯಲ್ಲಮ್ಮ ದೇವಿ ಜಾತ್ರೆ, ಪಲ್ಲಕ್ಕಿ ಉತ್ಸವ

ಪಟ್ಟಣ

ಚಿತ್ತಾಪುರ: ಸೀಗಿ ಹುಣ್ಣಿಮೆಯಂದು ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿರುವ ಯಲ್ಲಮ್ಮ ದೇವಿಯ ಜಾತ್ರೆ ನಿಮಿತ್ತ ಪಲ್ಲಕ್ಕಿ ಉತ್ಸವವು ಶ್ರದ್ಧಾಭಕ್ತಿ, ಸಂಭ್ರಮ, ಸಡಗರ, ಹರ್ಷೋದ್ಘಾರದೊಂದಿಗೆ ಅದ್ದೂರಿಯಾಗಿ ಜರುಗಿತು.

ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಮಧ್ಯಾಹ್ನ ವಿಶ್ವೇಶ್ವರ ಪೂಜೆ, ಗುರುಪೂಜೆ, ದೇವಿಯ ಪಲ್ಲಕ್ಕಿ ಪೂಜೆ ಜರುಗಿತು, ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ತಹಸೀಲ್ದಾರ್ ಅವರು ಮಂಗಳಾರತಿ ಮಾಡಿ ಪಲ್ಲಕ್ಕಿ ಹೊತ್ತುಕೊಂಡು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.

ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೇಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ಸೋಮವಾರ ಆಗಮಿಸಿದ್ದ ಭಕ್ತಸಮೂಹವು ದೇವಸ್ಥಾನದ ಎದುರಿಗೆ ಇರುವ ಎರಡು ಬಾವಿಗಳಲ್ಲಿ ಮತ್ತು ಹಿಂದುಗಡೆಯ ನಂದಿಬಾವಿಯಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ಷರು, ದೇವಿಯ ನಾಮಸ್ಮರಣೆಯೊಂದಿಗೆ ಯಲ್ಲಮ್ಮ ದೇವಸ್ಥಾನಕ್ಕೆ ಹೆಜ್ಜೆ ಹಾಕಿದರು. ಹೋಳಿಗೆ, ಕಡಬು, ಕರ್ಚೆಕಾಯಿ ಸೇರಿದಂತೆ ಮತ್ತಿತರ ಖಾದ್ಯಗಳು ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಿ ಧನ್ಯರಾದರು.

ಈ ಸಂದರ್ಭದಲ್ಲಿ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್‌ಐ ಶ್ರೀಶೈಲ್ ಅಂಬಾಟಿ, ತಿರುಮಲೇಶ್ ಕುಂಬಾರ, ತಿಮ್ಮಯ್ಯ ಕಾಳಗಿ, ಚಂದ್ರಕಾಂತ ಮಕಾಲೆ ಶಹಾಬಾದ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ
ಸಾಲಿ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಪ್ರಮುಖರಾದ ನಾಗರೆಡ್ಡಿ ಗೋಪಸೇನ್, ರತ್ನಾಕರ್ ನಾಯಕ, ಅಯ್ಯಪ್ಪ ರಾಮತೀರ್ಥ, ಗೌತಮ ನಾಯಕ, ಮೌನೇಶ್ ಭಂಕಲಗಿ ಸೇರಿದಂತೆ ಅನೇಕರು ಇದ್ದರು.

ಪಲ್ಲಕ್ಕಿ ಮೆರವಣಿಗೆ
ಲಚ್ಚಪ್ಪ ನಾಯಕ್ ಅವರ ಮನೆಯಿಂದ ಪ್ರಾರಂಭವಾದ ಯಲ್ಲಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಭಕ್ತರ ಜಯಘೋಷಗಳೊಂದಿಗೆ ಸಂಭ್ರಮ, ಸಡಗರದಿಂದ ದೇವಸ್ಥಾನ ತಲುಪಿತು.

ಮೆರವಣಿಗೆಯಲ್ಲಿನ ಡಿಜೆ ಸೌಂಡ್’ಗೆ ಯುವಕರು ಕುಣಿದು
ಕುಪ್ಪಳಿಸಿದರು. ಡೊಳ್ಳು ಹಲಗೆ ವಾದನ, ಯುವಕರ
ನೃತ್ಯ ಮತ್ತು ಸಾಂಸ್ಕೃತಿಕ ಕಲಾ ತಂಡಗಳು ಸರ್ವರ ಕಣ್ಮನ ಸೆಳೆದವು.

Leave a Reply

Your email address will not be published. Required fields are marked *