ಜಾಲಿವುಡ್‌ ಸ್ಟುಡಿಯೋಸ್‌ಗೆ ಬಿತ್ತು ಬೀಗ: ಬಿಗ್‌ ಬಾಸ್‌ ಸ್ಥಗಿತಕ್ಕೆ ಸೂಚನೆ

ವಿಶೇಷ ಮಾಹಿತಿ

ರಾಮನಗರ: ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಬಿದ್ದಿದೆ. ಬಿಗ್‌ ಬಾಸ್‌ ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ನಿಯಮ ಮೀರಿ ಜಾಲಿವುಡ್‌ ಸ್ಟುಡಿಯೋಸ್‌ ನಡೆಸುತ್ತಿರುವ ಬಗ್ಗೆ ನೋಟಿಸ್‌ ನೀಡಲಾಗಿತ್ತು. ಆದರೆ ಯಾವುದೆ ಪಾಲನೆಯಾಗದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸಂಜೆ ಸ್ಟುಡಿಯೋಸ್‌ಗೆ ಭೇಟಿ ನೀಡಿದರು.

ರಾಮನಗರ ತಹಸೀಲ್ದಾರ್‌ ತೇಜಸ್ವಿನಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಾಲಿವುಡ್‌ ಒಳಗೆ ಪರಿಶೀಲನೆ ನಡೆಸಿದರು.

ನೋಟಿಸ್ ತೆಗೆದುಕೊಳ್ಳಲು ಜಾಲಿವುಡ್ ಆಡಳಿತ ಮಂಡಳಿ ನಕಾರ ಮಾಡಿತು. ಆಗ ಜಾಲಿವುಡ್ ಸ್ಟುಡಿಯೋಸ್‌ ಸಿಬ್ಬಂದಿಯನ್ನು ತಹಸೀಲ್ದಾರ್ ತರಾಟೆಗೆ ತೆಗೆದುಕೊಂಡರು. ನೋಟಿಸ್ ಸ್ವೀಕರಿಸೋದಕ್ಕೆ ಬರಲು ಅರ್ಧ ಗಂಟೆ ಬೇಕಾ ಎಂದು ಗರಂ ಆದರು.

ಈ ಕೂಡಲೆ ನೋಟೀಸ್ ತೆಗೆದುಕೊಳ್ಳಿ. ಅಧಿಕೃತವಾಗಿ ಇಂದು ಸೀಜ್ ಮಾಡ್ತಿವಿ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಂಜೆ 7 ಗಂಟೆ ವರೆಗೂ ಎಕ್ಸಿಟ್ ಗೇಟ್ ಓಪನ್ ಮಾಡಿಕೊಳ್ಳಿ. ಕೂಡಲೆ ಜಾಲಿವುಡ್ ಸ್ಟುಡಿಯೋ ಕ್ಲೋಸ್ ಮಾಡುವಂತೆ ಸೂಚನೆ ನೀಡಿದರು.

ಕೊನೆಗೆ ಜಾಲಿವುಡ್ ಆಡಳಿತ ಮಂಡಳಿ ನೋಟಿಸ್‌ ಸ್ವೀಕರಿಸಿತು. ನಾಳೆಯಿಂದ ಜಾಲಿವುಡ್ ಸ್ಟುಡಿಯೋಸ್‌ ಯಾವುದೆ ಕಾರ್ಯಾಚರಣೆ ಮಾಡಬಾರದು. ಎಲ್ಲಾ ರೀತಿಯ ಕಾರ್ಯಚಟುವಟಿಕೆ ಸ್ಥಗಿತ ಮಾಡುವಂತೆ ಸೂಚನೆ ನೀಡಲಾಯಿತು. ಸ್ಟುಡಿಯೋಸ್‌ ಸ್ವತಃ ತಾವೇ ನಿಂತು ತಹಸೀಲ್ದಾರ್‌ ಬೀಗ ಹಾಕಿದರು. ಬಿಗ್‌ ಬಾಸ್‌ ಸ್ಥಗಿತಕ್ಕೂ ಸೂಚನೆ ನೀಡಿದರು.

ಬಿಗ್ ಬಾಸ್‌ನಿಂದ ಆಚೆ ಬರ್ತಾರಾ ಸ್ಪರ್ಧಿಗಳು ?
ಸೀಲ್‌ಡೌನ್ ಆದಮೇಲೆ ಒಳಗೆ ಯಾವುದೆ ಆಕ್ಟಿವಿಟಿ ನಡೆಯುವಂತಿಲ್ಲ. ಯಾವುದೆ ವ್ಯಕ್ತಿಗಳು ಇರುವಂತಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನು ಆಚೆ ಕಳುಹಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *