ಕಲಬುರಗಿ: ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯವನ್ನು ನಾಶಮಾಡಿ ಅಲ್ಲಿನ ಅನೇಕ ವನ್ಯಜೀವಿಗಳನ್ನು ಬೇಟೆಯಾಡಿ ನಾಶಮಾಡುತ್ತಿದ್ದಾನೆ. ಇದರಿಂದ ಕೆಲವು ಸಂತತಿ ನಾಶಹೊಂದಿದ್ದು, ಮತ್ತೆ ಕೆಲವು ಅಳಿವಿನಂಚಿನಲ್ಲಿವೆ. ಅರಣ್ಯ ಸಂಪತ್ತು, ಪ್ರಾಣಿ ಸಂಕುಲದ ರಕ್ಷಣೆ ಅಗತ್ಯವಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ನಾಗೇಶ್ ಹೇಳಿದರು.
ನಗರದ ಪಬ್ಲಿಕ್ ಸಾರ್ವಜನಿಕ ಉದ್ಯಾನವನದಲ್ಲಿರುವ ಕಿರು ಮೃಗಾಲಯದಲ್ಲಿ ಅರಣ್ಯ ಇಲಾಖೆ, ಕಿರು ಮೃಗಾಲಯ ಮತ್ತು ಮಕ್ಕಳ ಉದ್ಯಾನವನ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘71ನೇ ವಿಶ್ವ ವನ್ಯಜೀವಿ ಸಪ್ತಾಹ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ್ ಮಾತನಾಡಿ, ಪರಿಸರದ ಜೈವಿಕ ವ್ಯವಸ್ಥೆಯ ಸರಪಣಿಯಲ್ಲಿ ಒಂದು ಯಾವುದೆ ಜೀವಿಯ ಸಂತತಿ ನಾಶವಾದರೆ ಅದರ ನೇರ ಪರಿಣಾಮ ಪರಿಸರದ ಮೇಲಾಗಿ, ಅಸಮತೋಲನೆಯಾಗುತ್ತದೆ. ಆದ್ದರಿಂದ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತು, ವನ್ಯ ಜೀವಿಗಳ ಸಂರಕ್ಷಣೆ ಮಾಡುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಿದೆ. ವನ್ಯಜೀವಿಗಳು ಜೀವ ವೈವಿಧ್ಯತೆ ಕಾಪಾಡುತ್ತವೆ. ಜೀವಿಗಳ ನಾಶಗಳನ್ನು ತಡೆಗಟ್ಟುತ್ತವೆ. ಪ್ರವಾಸೋದ್ಯಮದ ಮೂಲಕ ಆರ್ಥಿಕ ಬೆಳವಣಿಗೆಯಾಗುತ್ತದೆ. ವನೀಕರಣಕ್ಕೆ ಉತ್ತೇಜನಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯ ಅಧಿಕಾರಿ ಜಟ್ಟೆಪ್ಪ ನಾವಿ, ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ್, ಪ್ರಾಣಿ ಪಾಲಕರಾದ ಅಂಬಿಕಾ, ಮಲ್ಲಮ್ಮ, ಶರಣಬಸಪ್ಪ, ಪ್ರಮುಖರಾದ ಮಲ್ಲಿಕಾರ್ಜುನ ಕಿಣ್ಣಿ ಸುಲ್ತಾನ್, ವಿಕ್ರಾಂತ್, ವಿಕಾಸ, ರತಿಕಾಂತ ಸೇರಿದಂತೆ ವಿವಿಧ ಪ್ರದೇಶಗಳ ಮಕ್ಕಳು, ನಾಗರಿಕರು ಭಾಗವಹಿಸಿದ್ದರು.