ಕಲಬುರಗಿ: ವಿಶ್ವದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ವಿಶ್ವದೆಲ್ಲೆಡೆ ಜನ ಜಾಗೃತಿ ಮೂಡಿಸಲು ಮತ್ತು ಅವುಗಳ ಪರಿಹರಿಸಲು ಅಂತರರಾಷ್ಟ್ರೀಯ ಸಹಕಾರ ಉತ್ತೇಜಿಸುವಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಪಾತ್ರ ಪ್ರಮುಖವಾಗಿದೆ. ಇವುಗಳ ಸದುಪಯೋಗದಿಂದ ರಾಷ್ಟ್ರ ಸೇರಿದಂತೆ ಜಾಗತಿಕ ಅಭಿವೃದ್ಧಿಗೆ ಸರ್ವರು ಕೈಜೋಡಿಸುವುದು ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಮಾಹಿತಿ ಪ್ರಸಾರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಆರ್ಥಿಕ ಬೆಳವಣಿಗೆ, ಜ್ಞಾನದ ಪ್ರವೇಶ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಹೇಗೆ ಉತ್ತೇಜಿಸಬಹುದು ಎಂಬುದರ ಮೇಲೆ ಗಮನಹರಿಸುತ್ತವೆ. ಸಾಮಾಜಿಕ ಕ್ಷೇತ್ರವು ವ್ಯಕ್ತಿಯಲ್ಲಿ ಸಂಸ್ಕಾರ, ಮೌಲ್ಯಗಳು ಬೆಳೆಸುತ್ತದೆ.ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಮೂಲಕ ಸಾಮಾಜಿಕ ವ್ಯವಸ್ಥೆಗೆ ಭದ್ರತೆ ನೀಡುತ್ತದೆ. ಇದು ಕುಟುಂಬ, ಧರ್ಮ, ಶಾಲೆ, ಸಮೂಹ ಮಾಧ್ಯಮ, ನೆರೆಹೊರೆಯ ಪರಿಸರವನ್ನು ಕಾಪಾಡುತ್ತದೆ. ಆರ್ಥಿಕ ಕ್ಷೇತ್ರವು ರಾಷ್ಟ್ರದಲ್ಲಿರುವ ಪ್ರತಿಯೊಬ್ಬರ ಜೀವನ ಮಟ್ಟ ಉತ್ತಮವಾಗಬೇಕೆಂಬ ಮಹತ್ವಕಾಂಕ್ಷೆ ಹೊಂದಿದೆ. ಸಾಮಾಜಿಕ-ಆರ್ಥಿಕ ಕ್ಷೇತ್ರಗಳ ಬೆಳವಣಿಗೆಯು ವಿಶ್ವದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಯಿಂದ ವ್ಯಕ್ತಿಯ ಬೆಳವಣಿಗೆಗೆಯಾಗುತ್ತದೆ. ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ವರದಕ್ಷಿಣೆಯಂತಹ ಸಾಮಾಜಿಕ ಸಮಸ್ಯೆಗಳು ನಿರ್ಮೂಲನೆಯಾಗಿ ಸಾಮಾಜಿಕ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ವ್ಯಕ್ತಿಯ ತಲಾದಾಯ ಮತ್ತು ರಾಷ್ಟ್ರಾದಾಯ ಹೆಚ್ಚಳ, ಕೃಷಿ, ಕೈಗಾರಿಗೆ, ವಾಣಿಜ್ಯ, ವ್ಯಾಪಾರ, ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗಬೇಕು. ಬಡತನ, ನಿರುದ್ಯೋಗ, ಅನಕ್ಷರತೆ, ಲಿಂಗ ತಾರತಮ್ಯ, ಪ್ರಾದೇಶಿಕ ಅಸಮತೋಲನೆ, ಜನಸಂಖ್ಯಾ ಸ್ಪೋಟದಂತಹ ಸಮಸ್ಯೆಗಳು ನಿರ್ಮೂಲನೆಯಾದರೆ ಆರ್ಥಿಕ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ. ಅಭಿವೃದ್ಧಿಯ ನೆಪದಲ್ಲಿ ಪರಿಸರದ ಮೇಲೆ ಮಾನವನ ದಬ್ಬಾಳಿಕೆ ಸಲ್ಲದು. ಸುಸ್ಥಿರ ಅಭಿವೃದ್ಧಿಯ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ನಿಲೊಫರ್ ಶೇಖ್, ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್ ಮತ್ತು ವಿದ್ಯಾರ್ಥಿಗಳು ಇದ್ದರು.