Uncategorized

ನೀರು ಮಾರಾಟಕ್ಕೂ ಇಳಿದ ಅಂಬಾನಿ, 30 ಸಾವಿರ ಕೋಟಿ ಉದ್ಯಮದಲ್ಲಿ ಭಾರಿ ಸಂಚಲನ: ದರ ಎಷ್ಟು ?

ಹೊಸದಿಲ್ಲಿ: ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಈ ವಲಯಕ್ಕೆ ಕಾಲಿಡಲು ಸಜ್ಜಾಗಿರುವ ರಿಲಯನ್ಸ್ ಇಂಡಸ್ಟ್ರೀಸ್. ಇದರ ಮಾಲೀಕ ಮುಕೇಶ್‌ ಅಂಬಾನಿ ‘ಕ್ಯಾಂಪಾ ಶ್ಯೂರ್’ ಎಂಬ ಹೊಸ ಬ್ರಾಂಡ್ ಅನ್ನು ಬಿಡುಗಡೆ ಮಾಡಿದ್ದಾರೆ. ಎಂದಿನಂತೆ ಆಕ್ರಮಣಕಾರಿ ಬೆಲೆ ನೀತಿ ಮತ್ತು ವಿಶಿಷ್ಟ ವ್ಯಾಪಾರ ತಂತ್ರದ ಮೂಲಕ, ದೇಶದ ಸುಮಾರು 30,000 ಕೋಟಿ ಮೌಲ್ಯದ ಈ ಬೃಹತ್ ಉದ್ಯಮದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಲು ಕಂಪನಿ ಮುಂದಾಗಿದೆ.

ರಿಲಯನ್ಸ್‌ನ ಹೊಸ ತಂತ್ರ

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ (ಆರ್‌ಸಿಪಿಎಲ್) ‘ಕ್ಯಾಂಪಾ ಶ್ಯೂರ್’ ಬ್ರಾಂಡ್‌ಗಾಗಿ ದೇಶದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ನೀರಿನ ಬಾಟ್ಲಿಂಗ್ ತಯಾರಕರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಿದೆ. ಯಾವುದೇ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಬದಲು, ಬಾಟ್ಲಿಂಗ್, ತಂತ್ರಜ್ಞಾನ ಮತ್ತು ಬ್ರಾಂಡಿಂಗ್ ವಿಚಾರಗಳಲ್ಲಿ ಸಹಯೋಗ ನೀಡುವುದಾಗಿ ಕಂಪನಿ ಸ್ಪಷ್ಟಪಡಿಸಿದೆ.

ಈ ಬಗ್ಗೆ ಮಾತನಾಡಿರುವ ಆರ್‌ಸಿಪಿಎಲ್ ನಿರ್ದೇಶಕ ಟಿ ಕೃಷ್ಣಕುಮಾರ್, “ನಾವು ಈಗಾಗಲೇ ಉತ್ತರ ಭಾರತದ ಸುಮಾರು ಎರಡು ಡಜನ್ ಪ್ರಾದೇಶಿಕ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಈ ಪಾಲುದಾರಿಕೆಯು ಸಣ್ಣ ಬ್ರಾಂಡ್‌ಗಳಿಗೂ ಉತ್ತಮ ಗುಣಮಟ್ಟದ ಮಾನದಂಡಗಳನ್ನು ಖಚಿತಪಡಿಸಲು ಮತ್ತು ಉದ್ಯಮವನ್ನು ಪ್ರಜಾಪ್ರಭುತ್ವಗೊಳಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.

ಮತ್ತೊಮ್ಮೆ ಬೆಲೆ ಸಮರ

‘ಕ್ಯಾಂಪಾ ಶ್ಯೂರ್’ ಬ್ರಾಂಡ್‌ನ ಪ್ರಮುಖ ಆಕರ್ಷಣೆಯೇ ಅದರ ಬೆಲೆಯಾಗಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಬಿಸ್ಲೆರಿ, ಕೋಕಾ-ಕೋಲಾದ ಕಿನ್ಲೆ ಮತ್ತು ಪೆಪ್ಸಿಕೋದ ಅಕ್ವಾಫಿನಾದಂತಹ ಪ್ರಮುಖ ಬ್ರಾಂಡ್‌ಗಳಿಗಿಂತ ಶೇ. 20-30ರಷ್ಟು ಕಡಿಮೆ ದರದಲ್ಲಿ ನೀರನ್ನು ಮಾರಾಟ ಮಾಡಲು ರಿಲಯನ್ಸ್ ನಿರ್ಧಾರ ಮಾಡಿದೆ.

  • ಒಂದು ಲೀಟರ್ ಬಾಟಲಿ: ಇತರೆ ಬ್ರಾಂಡ್‌ಗಳು 20 ರೂ.ಗೆ ಮಾರಾಟ ಮಾಡಿದರೆ, ಕ್ಯಾಂಪಾ ಶ್ಯೂರ್ ಕೇವಲ 15 ರೂ.ಗೆ ಲಭ್ಯವಿರಲಿದೆ.
  • ಎರಡು ಲೀಟರ್ ಪ್ಯಾಕ್: ಸ್ಪರ್ಧಿಗಳ ಬೆಲೆ 30-35 ರೂ. ಇದ್ದು, ಕ್ಯಾಂಪಾ ಶ್ಯೂರ್ 25 ರೂ.ಗೆ ಸಿಗಲಿದೆ.
  • ಸಣ್ಣ ಪ್ಯಾಕ್: 250 ಮಿಲಿಲೀಟರ್ ಬಾಟಲಿಯ ಬೆಲೆ 5 ರೂ.ನಿಂದ ಆರಂಭವಾಗಲಿದೆ.

ಮಾರುಕಟ್ಟೆಯ ಮೇಲೆ ಪರಿಣಾಮ

ರಿಲಯನ್ಸ್‌ನ ಈ ನಡೆ, ತಂಪು ಪಾನೀಯಗಳ ಮಾರುಕಟ್ಟೆಯಲ್ಲಿ ಕ್ಯಾಂಪಾ ಕೋಲಾ ಮಾಡಿದ ಪರಿಣಾಮವನ್ನೇ ಮತ್ತೆ ನೆನಪಿಸುತ್ತಿದೆ. ಕ್ಯಾಂಪಾ ಕೋಲಾವನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಿದಾಗ, ಪೆಪ್ಸಿ ಮತ್ತು ಕೋಕಾ-ಕೋಲಾ ತಮ್ಮ ಉತ್ಪನ್ನಗಳ ಬೆಲೆ ಇಳಿಸಲು ಅಥವಾ ಸಣ್ಣ ಪ್ಯಾಕ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದವು. ಈಗ ನೀರಿನ ಮಾರುಕಟ್ಟೆಯಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಉಳಿಸಿಕೊಳ್ಳಲು ಬಿಸ್ಲೆರಿ, ಕೋಕ್ ಮತ್ತು ಪೆಪ್ಸಿಕೋ ತಮ್ಮ ಬ್ರಾಂಡಿಂಗ್ ಮತ್ತು ಪ್ರಚಾರದ ವೆಚ್ಚವನ್ನು ಹೆಚ್ಚಿಸಲು ಯೋಜಿಸುತ್ತಿವೆ.

ಕೇವಲ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವುದೇ ನಮ್ಮ ಗುರಿಯಲ್ಲ, ಬದಲಿಗೆ ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಉತ್ಪನ್ನಗಳನ್ನು ಒದಗಿಸುವುದು ಮುಖ್ಯ ಎಂದು ಕೃಷ್ಣಕುಮಾರ್ ತಿಳಿಸಿದ್ದಾರೆ. ಪ್ರಾದೇಶಿಕ ತಯಾರಕರೊಂದಿಗೆ ಕೈಜೋಡಿಸುವುದರಿಂದ ಗುಣಮಟ್ಟದ ಮಾನದಂಡಗಳನ್ನು ಸ್ಥಾಪಿಸಬಹುದು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ನಕಲಿ ಬಾಟಲಿ ನೀರಿನ ಹಾವಳಿಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಿಲಯನ್ಸ್ ಈಗಾಗಲೇ ‘ಇಂಡಿಪೆಂಡೆನ್ಸ್’ ಹೆಸರಿನಲ್ಲಿ ಪ್ರೀಮಿಯಂ ಬೆಲೆಯ ನೀರನ್ನು ಮಾರಾಟ ಮಾಡುತ್ತಿದ್ದು, ವಿಭಿನ್ನ ಮಾರುಕಟ್ಟೆಗಳನ್ನು ತಲುಪಲು ಬಹು-ಬ್ರಾಂಡ್ ತಂತ್ರದ ಮೊರೆ ಹೋಗಿದೆ.

ನೆರವಿಗೆ ಬಂದ ಜಿಎಸ್‌ಟಿ

ಇತ್ತೀಚೆಗೆ, ಸೆಪ್ಟೆಂಬರ್ 22 ರಂದು ಸರ್ಕಾರವು ಪ್ಯಾಕೇಜ್ಡ್ ನೀರಿನ ಮೇಲಿನ ಜಿಎಸ್‌ಟಿಯನ್ನು ಶೇ. 18 ರಿಂದ ಶೇ. 5ಕ್ಕೆ ಇಳಿಸಿತ್ತು. ಇದರಿಂದಾಗಿ ಎಲ್ಲಾ ಕಂಪನಿಗಳು ಬೆಲೆಯನ್ನು ಇಳಿಕೆ ಮಾಡಿದ್ದವು. ಇದೇ ಸಮಯವನ್ನು ಬಳಸಿಕೊಂಡು, ರಿಲಯನ್ಸ್ ತನ್ನ ‘ಕ್ಯಾಂಪಾ ಶ್ಯೂರ್’ ಬ್ರಾಂಡ್ ಅನ್ನು ಮತ್ತಷ್ಟು ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಮೊದಲ ಹಂತದಲ್ಲಿ ಮುಂದಿನ 2 ವಾರಗಳಲ್ಲಿ ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ಈ ನೀರು ಲಭ್ಯವಾಗಲಿದೆ

Leave a Reply

Your email address will not be published. Required fields are marked *