ಆರೋಗ್ಯ ಸಂಜೀವಿನಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ: ಬಸವರಾಜ ಬಳೊಂಡಗಿ

ಸುದ್ದಿ ಸಂಗ್ರಹ

ಕಲಬುರಗಿ: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿರುವ ಸರ್ಕಾರಿ ನೌಕರರು ಹಾಗೂ ಅವರ
ಕುಟುಂಬದವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೊಂಡಗಿ ತಿಳಿಸಿದ್ದಾರೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅ.1 ರಿಂದ ಜಾರಿಗೊಳಿಸಲಾಗಿದೆ. ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆ ನೀಡಬೇಕು. ರಾಜ್ಯ ಸರ್ಕಾರದ ಅಧಿಕಾರಿ ಅಥವಾ ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯದ ಮಿತಿಯನ್ನು 17 ಸಾವಿರ ರೂ.ಗಳಿಂದ 27 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದರು.

ಮಾಸಿಕ ವಂತಿಕೆ ನೀಡಲು ಇಚ್ಛಿಸದೆ ಇರುವ ನೌಕರರು ಲಿಖಿತವಾಗಿ ಅ.18ರೊಳಗೆ ಸಂಬಂಧಿಸಿದ ಡಿಡಿಓಗಳಿಗೆ ನೀಡಬೇಕು. ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ- ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ದಿಷ್ಟ ಪಡಿಸಿರುವ ವಂತಿಕೆಯನ್ನು ಅಕ್ಟೋಬರ್ -2025ನೇ ತಿಂಗಳಿನಿಂದ ನೀಡಬೇಕು. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ರಾಜ್ಯ ಸರ್ಕಾರದ ಎಲ್ಲ ಅಧಿಕಾರಿ/ನೌಕರರು ಎಚ್‌ಆರ್‌’ಎಂಎಸ್‌ ರಲ್ಲಿ ನೊಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಲಾಭವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಪಡೆದುಕೊಳ್ಳಬೇಕು. ಯೋಜನೆ ಜಾರಿಯೋಳಿಸಿದ ರಾಜ್ಯ ಸರ್ಕಾರಕ್ಕೆ ಹಾಗೂ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರಿಗೆ ಕೃತಜ್ಞತೆ ತಿಳಿಸುತ್ತೆವೆ.‌

ಬಸವರಾಜ ಬಳೊಂಡಗಿ
ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಲಬುರಗಿ

Leave a Reply

Your email address will not be published. Required fields are marked *