ಕಲಬುರಗಿ: ಪ್ರತಿಯೊಬ್ಬರು ಧರ್ಮ ಮತ್ತು ಪ್ರದೇಶಕ್ಕೆ ಪ್ರಾತಿನಿಧ್ಯ ನೀಡದೆ, ಎಲ್ಲರು ಭಾರತೀಯರು ಒಂದೆ ಎಂಬ ರಾಷ್ಟ್ರಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಯಡ್ರಾಮಿ ವಿರಕ್ತ ಮಠದ ಪೂಜ್ಯ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಜೇವರ್ಗಿ ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ‘ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಶಿಕ್ಷಕರ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ತಂದೆ-ತಾಯಿ, ಗುರು-ಹಿರಿಯರು, ದೇಶಕ್ಕೆ ಗೌರವ ನೀಡಬೇಕು. ವಿದ್ಯಾರ್ಥಿ ದಿಸೆಯಿಂದಲೇ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಕೆಲಸ ಮಾಡಬೇಕು. ಹಣದಿಂದ ಎಲ್ಲವು ಸಾಧ್ಯವಿಲ್ಲ. ಸಾಮಾನ್ಯ ಪರಿಜ್ಞಾನದೊಂದಿಗೆ ಬದುಕಿನ ಸಾರ್ಥಕತೆ ಮಾಡಿಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ, ವಿದ್ಯಾರ್ಥಿ ಜೀವನದಿಂದಲೆ ಶಿಸ್ತು, ಸಂಯಮ, ಪ್ರಯತ್ನಶೀಲ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಅಧ್ಯಯನ, ಪ್ರಯತ್ನ ಅಗತ್ಯ. ವೈಚಾರಿಕತೆಯ ಬದುಕು ನಮ್ಮದಾಗಬೇಕು. ಸಮಾಜದಲ್ಲಿ ಬದುಕುವ ಕಲೆಯನ್ನು ಕಲಿಯಬೇಕು. ಸಾಧನೆಗೆ ನಿರಂತರ ಪರಿಶ್ರಮ ಅಗತ್ಯವಾಗಿದೆ. ನಿಮ್ಮ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ನೆಲದ ಸಂಸ್ಕೃತಿ ಅರಿಯಿರಿ. ಉನ್ನತವಾದ ಸಾಧನೆ ಮಾಡುವ ಮೂಲಕ ಜೇವರ್ಗಿ ತಾಲೂಕಿನ ಭವ್ಯ ಇತಿಹಾಸ ಸಾರಬೇಕು. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಜೇವರ್ಗಿ ನೆಲದ ಕೊಡುಗೆ ಅಪಾರವಾಗಿದೆ. ಶರಣರು, ಸಂತರು, ಮಹನೀಯರ ಜೀವನ, ಸಾಧನೆಯ ಬಗ್ಗೆ ಅಧ್ಯಯನ ಮಾಡಿದರೆ, ಅದು ಸಾಧನೆಗೆ ಪ್ರೇರಣೆ ನೀಡುತ್ತದೆ ಎಂದು ಅನೇಕ ದೃಷ್ಟಾಂತಗಳೊಂದಿಗೆ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಡಾ.ಮಾಳಪ್ಪ ಎಸ್.ಪೂಜಾರಿ ಹಾಲಗಡ್ಲಾ ಉದ್ಘಾಟಿಸಿದರು.
ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸತ್ಕರಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಸತ್ಕರಿಸಿ, ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಡಾ.ಎಸ್.ಎಲ್ ಭೈರಪ್ಪನವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಭೂತಾಳಿ ಎಂ.ಪೂಜಾರಿ, ಕಾರ್ಯದರ್ಶಿ ಜಗನಾಥ ಎಂ.ಮಾಗಣಗೇರಿ, ಕಾಲೇಜಿನ ಉಪನ್ಯಾಸಕ ಎಚ್.ಬಿ ಪಾಟೀಲ, ಪ್ರಮುಖರಾದ ಶರಣಗೌಡ ಬಿರಾದಾರ, ಬಸವರಾಜ ಬಿರಾದಾರ, ಸಂತೋಷ ಪಾಟೀಲ್, ರವಿ ಹೂಗಾರ, ಸಂಗು ಯಾಳವಾರ, ಬಲವಂತರಾಯ ಸೇರಿದಂತೆ ಅನೇಕರು ಇದ್ದರು.
ಚಂದ್ರಕಲಾ, ಅನುಕ್ಷಾ ಪ್ರಾರ್ಥಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಮ್ಯಾಳಗಿ ಸ್ವಾಗತಿಸಿದರು, ಕಾಲೇಜಿನ ಪ್ರಾಚಾರ್ಯ ಶ್ರೀಶೈಲ್ ಕೆ.ಖಣದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕಿ ಜ್ಯೋತಿ ನಿರೂಪಿಸಿ, ವಂದಿಸಿದರು.