ಕಲಬುರಗಿ: ಅತ್ಯಾಚಾರಿಗೆ 10 ವರ್ಷ ಕಠಿಣ ಶಿಕ್ಷೆ, 50 ಸಾವಿರ ರೂ ದಂಡ

ಜಿಲ್ಲೆ

ಕಲಬುರಗಿ: ತಾಲೂಕಿನ ಗ್ರಾಮವೊಂದರ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕಬ್ಬಿನ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ ಅಪರಾಧ ಸಾಬೀತಾಗಿದ್ದರಿಂದ ಹೊನ್ನಪ್ಪ ಶರಣಪ್ಪ ದೊಡ್ಡಮನಿ ಎಂಬಾತನಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿದೆ.

22 ಜನವರಿ 2024 ರಂದು ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರ ಎಸಗುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆ ಚೀರಾಡಿದ್ದರಿಂದ ಆಕೆಯ ಸೋದರತ್ತೆ ಬಂದು ನೋಡಿದಾಗ ಹೊನ್ನಪ್ಪ ಪರಾರಿಯಾಗಿದ್ದ. ನಂತರ ಆಕೆ ಮಹಿಳೆಯ ಸಹೋದರ ಮತ್ತು ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಅವರು ಅಪರಾಧಿಯನ್ನು ಹುಡುಕಿ ಪೊಲೀಸರಿಗೆ ಒಪ್ಪಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಫರಹತಾಬಾದ ಠಾಣೆಯ ತನಿಖಾಧಿಕಾರಿಗಳಾದ ಮಲ್ಲಿಕಾರ್ಜುನ ಇಕ್ಕಳಕಿ, ಬಾಲಚಂದ್ರ ಲಕ್ಕಂ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಸಿ.ಜಿ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಎನ್ ಬಳಬಟ್ಟಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *