ಕಲಬುರಗಿ: ಲಸಿಕೆಗಳು ಕಾಯಿಲೆ ವಿರುದ್ದ ರಾಮಬಾಣದಂತೆ ಕಾರ್ಯನಿರ್ವಹಿಸುತ್ತವೆ. ಲಸಿಕೆ ಪಡೆಯುವ ಬಗ್ಗೆ ಭಯ ಪಡದೆ ತೆಗೆದುಕೊಳ್ಳಬೇಕು ಎಂದು ಖ್ಯಾತ ಕುಟುಂಬ ವೈದ್ಯ ಡಾ.ಅಮರೇಶ ಪತ್ತಾರ ಹೇಳಿದರು.
ನಗರದ ಆಳಂದ ರಸ್ತೆಯ ಶಹಾಬಜಾರ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯ ಶಿವಶಕ್ತಿ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ರವಿವಾರ ಜರುಗಿದ ‘ರಾಷ್ಟ್ರೀಯ ಲಸಿಕೆ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಮಾನವನಿಗೆ ವಿವಿಧ ಕಾರಣಗಳಿಂದ ಕಾಯಿಲೆ ಬರುತ್ತವೆ. ಅವುಗಳ ನಿವಾರಣೆಗೆ ಮತ್ತು ಬರದಂತೆ ತಡೆಯಲು ಲಸಿಕೆ ಪಡೆಯುವದು ಅಗತ್ಯವಾಗಿದೆ ಎಂದರು.
ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ.ಬಸವರಾಜ ಜಿ.ಎಂ ಮಾತನಾಡಿ, ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿರುವದರಿಂದ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಲಸಿಕೆ ಪಡೆದು, ಮಾರಣಾಂತಿಕ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.
ಗರ್ಭಿಣಿಗೆ ಟಿಡಿ, ಮಗು ಹುಟ್ಟಿದ ನಂತರ 24ಗಂಟೆ ಒಳಗಾಗಿ ಜೀರೋ ಪೊಲಿಯೋ ಮತ್ತು ಬಿಸಿಜಿ, 1.5 ತಿಂಗಳಿನ ನಂತರ ಪೆಂಟಾವೈಲೆಟ್, ಪೊಲಿಯೋ, ಐಪಿವಿ ಮತ್ತು ರೋಟಾ ಲಸಿಕೆ ನೀಡಬೇಕು. 2.5 ತಿಂಗಳಿಗೆ ಎರಡನೇ ಡೋಸ್ ಮತ್ತು 3.5 ತಿಂಗಳಿಗೆ ಮೂರನೇ ಡೋಸ್ ನೀಡಬೇಕು. 9 ರಿಂದ 12ನೇ ತಿಂಗಳೊಳಗಾಗಿ ಮೀಜಲ್ಸ್ ಲಸಿಕೆ, 1.5 ವರ್ಷಕ್ಕೆ ಡಿಪಿಟಿ ಬೂಷ್ಟರ್ ಮತ್ತು ಮೀಜಲ್ಸ್ ಎರಡನೇ ಡೋಸ್ ಲಸಿಕೆ, 5 ವರ್ಷಕ್ಕೆ ಡಿಪಿಟಿ, 10 ವರ್ಷಕ್ಕೆ ಟಿಡಿ, 16 ವರ್ಷಕ್ಕೆ ಟಿಡಿ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವ ಮೂಲಕ ಮಗುವಿಗೆ ಯಾವುದೆ ಕಾಯಿಲೆ ಬರದಂತೆ ತಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪ್ಪಾ ಎಸ್. ಬಿರಾದಾರ, ಪ್ರಮುಖರಾದ ಆದಿತ್ಯ, ರವಿ, ವಿಶಾಲ್ ಹಾಗೂ ಬಡಾವಣೆ, ಸುತ್ತ-ಮುತ್ತಲಿನ ಅನೇಕ ರೋಗಿಗಳು, ನಾಗರಿಕರು ಭಾಗವಹಿಸಿದ್ದರು.