ಸುದ್ದಿ ಸಂಗ್ರಹ ಶಹಾಬಾದ
ಅತಿಯಾದ ಮಳೆಯಿಂದ ರೈತರು ಬೆಳೆದ ತೊಗರಿ, ಹೆಸರು, ಉದ್ದು ಸೇರಿದಂತೆ ಇತರ ಎಲ್ಲಾ ಬೆಳೆಗಳು ಸಂಪೂರ್ಣ ನಷ್ಟವಾಗಿದೆ, ಹೀಗಾಗಿ ಕಲಬುರಗಿ ಜಿಲ್ಲೆಯು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ಶಹಾಬಾದ್ ಮಂಡಲ ಅಧ್ಯಕ್ಷ ನಿಂಗಣ್ಣ ಹುಳುಗೋಳ್ಕರ್ ಆಗ್ರಹಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಬುಧುವಾರ ಬಿಜೆಪಿ ಪಕ್ಷ, ರೈತ ಮೋರ್ಚಾದ ವತಿಯಿಂದ ಅತಿವೃಷ್ಟಿ ಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಮಾತನಾಡಿ, ರೈತರಿಗೆ ಸೇರಬೇಕಾದ ಹಳೆಯ ಪರಿಹಾರ ಬಾಕಿಯನ್ನು ಬಿಡುಗಡೆ ಮಾಡಬೇಕು, ವಿಮೆಯಿಲ್ಲದ ಎಲ್ಲಾ ರೈತರಿಗೂ ಪರಿಹಾರ ಘೋಷಿಸಬೇಕು, ಸಾಲ ಭಾದೆಯಲ್ಲಿ ಮುಳುಗಿರುವ ರೈತರ ಸಾಲ ಮನ್ನಾ ಮಾಡಬೇಕು, ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ ಪರಿಹಾರ ಘೋಷಿಸಬೇಕು ಎಂದರು.
ಬಿಜೆಪಿ ಪಕ್ಷದ ಮುಖಂಡರಾದ ಅಣವೀರ ಇಂಗಿನಶೆಟ್ಟಿ, ಅರುಣಕುಮಾರ ಪಟ್ಟಣಕರ ಮತ್ತು ಚಂದ್ರಕಾಂತ ಗೊಬ್ಬುರಕರ್ ಮಾತನಾಡಿ, ರಾಜ್ಯ ಸರ್ಕಾರ ಶೀಘ್ರದಲ್ಲಿ ರೈತರ ಬೆಳೆ ಪರಿಹಾರ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ನೀಲಪ್ರಭ ಬಬಲಾದ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಗ್ರೇಟ್ 2 ತಹಸೀಲ್ದಾರ್ ಗುರುರಾಜ ಸಂಗಾವಿ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಕನಕಪ್ಪ ದಂಡುಗುಳ್ಕರ್, ಬಸವರಾಜ ಬಿರಾದಾರ, ದೇವದಾಸ ಜಾಧವ್, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ಶರಣಪ್ಪ ಬುಗಶೆಟ್ಟಿ, ನಾರಾಯಣ ಕಂದಕೂರ, ಶಿವಕುಮಾರ ಇಂಗಿನಶೆಟ್ಟಿ, ಸೂರ್ಯಕಾಂತ ವಾರದ, ಬಸವರಾಜ ಮದ್ರಿಕಿ, ಶಶಿಕಲಾ ಸಜ್ಜನ, ನೀಲಗಂಗಮ್ಮ ಗಂಟ್ಲಿ, ಪದ್ಮಾ ಕಟಗೆ ಮತ್ತು ಬಿಜೆಪಿ ಪಕ್ಷದ ರೈತ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.