ಕಲಬುರಗಿ: ಸರ್ವ ಕಾಯಿಲೆಗೆ ಮದ್ದನ್ನು ನೀಡುವ ಆಯುರ್ವೇದ ಪದ್ಧತಿ ಸಮಗ್ರ ಆರೋಗ್ಯ ವ್ಯವಸ್ಥೆಯಾಗಿದ್ದು, ಎಲ್ಲರು ಆಯುರ್ವೇದ ಪದ್ಧತಿಯತ್ತ ಮುಖ ಮಾಡಬೇಕಾದದ್ದು ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಆಯುರ್ವೇದ ತಜ್ಞ ವೈದ್ಯ ಡಾ.ಸದಾನಂದ ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಶಹಾಬಾದ್ ರಿಂಗ್ ರಸ್ತೆಯ ಸಮೀಪದ ಚರಕ ಆಯುರ್ವೇದ ಆಸ್ಪತ್ರೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ‘10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ’ ಮತ್ತು ‘ಧನ್ವಂತರಿ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಒತ್ತಡ ಬದುಕಿನಲ್ಲಿ ಆರೋಗ್ಯದೆಡೆಗೆ ನಿಷ್ಕಾಳಜಿ ವಹಿಸಿ, ನಾವು ಅನೇಕ ರೋಗಗಳಿಗೆ ಆಹ್ವಾನಿಸುತಿದ್ದೆವೆ, ಯಾವುದೆ ರೀತಿಯ ಅಡ್ಡ ಪರಿಣಾಮಗಳ್ಳಿಲ್ಲದೆ, ಸಂಪೂರ್ಣ ಗುಣಮುಖವಾಗುವ ವೈದ್ಯಕೀಯ ಪದ್ಧತಿ ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ನಮಗೆ ನೀಡಿದ್ದಾರೆ. ಜನರು ಇದರ ಬಗ್ಗೆ ಅಲಕ್ಷ್ಯ ಮಾಡಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ಆಯುರ್ವೇದ ವೈದ್ಯಕೀಯ ಪದ್ಧತಿ ಭವಿಷ್ಯದ ದೃಷ್ಟಿಯಿಂದ ಅತ್ಯವಶ್ಯಕವಾಗಿದೆ. ಇಂದಿನ ಆಧುನಿಕ ವಿವಿಧ ವೈದ್ಯಕೀಯ ಪದ್ಧತಿಗಳಿಗಿಂತಲೂ ಉತ್ತಮವಾದ, ಅಡ್ಡ ಪರಿಣಾಮವಿಲ್ಲದ ಚಿಕಿತ್ಸಾ ಪದ್ಧತಿಗೆ ಅನಿವಾರ್ಯವಾಗಿ ಮೊರೆಹೋಗಬೇಕಾಗಿದೆ. ಇದು ನಮ್ಮ ನೆಲದ ಪದ್ಧತಿಯಾಗಿದ್ದು, ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವು ಕೂಡಾ ಹೌದು. ಆಯುರ್ವೇದ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ಆಯುರ್ವೇದ ಪದ್ಧತಿಗೆ ಧನ್ವಂತರಿ ಅವರ ಕೊಡುಗೆ ಅನನ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಆಯುರ್ವೇದ ತಜ್ಞೆ ಡಾ.ಪ್ರಿಯದರ್ಶಿನಿ ಎಸ್.ಪಾಟೀಲ, ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಪ್ರಮುಖರಾದ ನೀಲಮ್ಮ, ಮೈನಾಬಾಯಿ, ಗೌರಿ, ಸುಧಾ ಸೇರಿದಂತೆ ಅನೇಕರು ಇದ್ದರು.