ಬೆಂಗಳೂರು: ರಸ್ತೆಯಲ್ಲಿ ಸೈಡ್ ಬಿಡದಿದ್ದಕ್ಕೆ ಕಾರು ಗುದ್ದಿಸಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆಗೆ ಯತ್ನಿಸಿದ ಸಾಫ್ಟ್‌ವೇರ್ ಇಂಜಿನಿಯರ್ ಸುಕೃತ್ ಕೇಶವ್‌ನನ್ನು ಸದಾಶಿವ ನಗರ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 26 ರಂದು ಅಪಘಾತವೆಂದು ಕೇಸ್ ದಾಖಲಾಗಿತ್ತು. ತನಿಖೆ ನಂತರ ಉದ್ದೇಶಪೂರ್ವಕ ಕೊಲೆಯತ್ನ ಎಂದು ಗೊತ್ತಾಗಿದೆ.
ರಾಮಯ್ಯ ಸಿಗ್ನಲ್‌ನಲ್ಲಿ ಫ್ರೀ ಲೆಫ್ಟ್ ಬ್ಲಾಕ್ ಮಾಡಲಾಗಿತ್ತು. ಈ ವೇಳೆ ಹಿಂದಿನಿಂದ ಬಂದ ಕಾರಿನ ಚಾಲಕ ಹಾರ್ನ್ ಮಾಡಿದಾಗ ಬೈಕ್ ಸವಾರ ಸಿಗ್ನಲ್ ಲೆಫ್ಟ್ ಫ್ರೀ ಟರ್ನ್ ಇಲ್ಲ ಎಂದಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಕಾರು ಚಾಲಕ ಸುಕೃತ್, ಕೋಪದಲ್ಲಿ ಉದ್ದೇಶಪೂರ್ವಕವಾಗಿ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.
ಬೈಕ್‌ನಲ್ಲಿ ಗಂಡ, ಹೆಂಡತಿ ಹಾಗೂ ಮಗು ಮೂರು ಜನ ಇದ್ದರು. ಉದ್ದೇಶಪೂರ್ವಕವಾಗಿ ಕಾರನ್ನು ಬಲಕ್ಕೆ ಎಳೆದು ಬೈಕ್‌ಗೆ ಡಿಕ್ಕಿ ಹೊಡೆದು ಕಾರು ಚಾಲಕ ಸುಕೃತ್ ಎಸ್ಕೇಪ್ ಆಗಿದ್ದ. ಇತರ ವಾಹನ ಸವಾರರು ಬೈಕ್‌ನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮೊದಲಿಗೆ ಪೊಲೀಸರು ಇದನ್ನು ಹಿಟ್ ಅಂಡ್ ರನ್ ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ತನಿಖೆ ಮುಂದುವರಿದಂತೆ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಪರಿಶೀಲನೆ ವೇಳೆ, ಇದು ಕೇವಲ ಅಪಘಾತವಲ್ಲದೆ, ಉದ್ದೇಶಪೂರ್ವಕವಾಗಿ ನಡೆದ ಕೊಲೆಯತ್ನ ಎಂಬುದು ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ, ನ.7 ರಂದು ಪ್ರಕರಣವನ್ನು ಸದಾಶಿವನಗರ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗೆ ವರ್ಗಾಯಿಸಿ, ಕೊಲೆಯತ್ನ ಪ್ರಕರಣ ದಾಖಲಿಸಿ ಸಾಫ್ಟ್‌ವೇರ್ ಇಂಜಿನಿಯರ್ ಸುಕತ್‌ನನ್ನು ಬಂಧಿಸಿದ್ದಾರೆ.