ಕಲಬುರಗಿ: ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವುದು, ಸೂಕ್ತ ವೇತನ, ಸರ್ಕಾರಿ ಸೌಲಭ್ಯಗಳು ದೊರೆಯಬೇಕು ಎಂದು ಹಿರಿಯ ಪೌರ ಕಾರ್ಮಿಕ ತಾರಾಚಂದ ರಾಠೋಡ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ರಾಜ್ಯ ಪೌರ ಕಾರ್ಮಿಕರ ದಿನಾಚರಣೆ’ಯಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕಸ ವಿಲೇವಾರಿ, ಸ್ವಚ್ಚತೆ ಮಾಡುವ ಕಾರ್ಯ ನಿರ್ವಹಿಸುತ್ತಿರುವ ಕಾಯಕ ಜೀವಿಗಳಾದ ಪೌರ ಕಾರ್ಮಿಕರು ಸ್ವಚ್ಚತೆಯ ರಾಯಭಾರಿಗಳು. ಅವರ ಸೇವೆ ಅನನ್ಯವಾಗಿದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಟವಾಗಿವೆ. ದುಡಿಯುವ ವರ್ಗ ಕನಿಷ್ಟ ಮತ್ತು ದುಡಿಸಿಕೊಳ್ಳುವ ವರ್ಗ ಗರಿಷ್ಟ ಎಂಬ ಮನೋಭಾವನೆಯನ್ನು ತೆಗೆದು ಕಾಯಕಕ್ಕೆ ದೈವತ್ವದ ಸ್ಥಾನ ನೀಡಿದ ಬಸವಾದಿ ಶರಣರ ಕೊಡುಗೆ ಅನನ್ಯವಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾರ್ಮಿಕರ ಹಿತರಕ್ಷಣೆಗಾಗಿ ಸಂವಿಧಾನದ ಮೂಲಕ ಕಾನೂನುಗಳನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಾದ ತಾರಾಚಂದ ರಾಠೋಡ್ ಮತ್ತು ಶಿವಲಿಂಗಮ್ಮ ಪಡ್ಡನವರ್ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದಾ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್ ಮತ್ತು ವಿದ್ಯಾರ್ಥಿಗಳು ಇದ್ದರು.