ಚಿತ್ತಾಪುರ: ಅ.1 ರಂದು ಮಹಾನವಮಿಯ ಆಯುಧಪೂಜೆಯಂದು, ತಾಲೂಕಿನ ಶ್ರೀಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧಿಪತಿ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಪ್ರಸ್ತುತ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.
ಪ್ರಸ್ತುತ ಪೂಜ್ಯರ ಜನ್ಮದಿನೋತ್ಸವ ಹಾಗೂ ಮಠದ ಹಿರಿಯ ಗುರುಗಳ ಪುಣ್ಯಸ್ಮರಣೋತ್ಸವ ಪ್ರಯುಕ್ತ ಶ್ರೀಮಠದಲ್ಲಿ ನಾಳೆಯಿಂದ ಪ್ರತಿನಿತ್ಯ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ ಎಂದರು.
ಪ್ರತಿದಿನ ರಾತ್ರಿ ಸದ್ಭಕ್ತರಿಂದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಮಹಾ ಪಾದಪೂಜೆ ನಡೆಯಲಿದ್ದು, ಈ ಸಂದರ್ಭದಲ್ಲಿ ನಾಡಿನ ವಿವಿಧ ಕಲಾವಿದರಿಂದ ಸಂಗೀತನಾದಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತರಿಗೆ ಮಹಾಪ್ರಸಾದ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿವೆ ಎಂದರು.
ಅ.1 ರಂದು ಬುಧವಾರ ಮಹಾನವಮಿಯ ಆಯುಧಪೂಜೆಯ ದಿನದಂದು ನಡೆಯುವ ಜನ್ಮದಿನೋತ್ಸವ ಹಾಗೂ ಪುಣ್ಯಾರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಕ್ತರಿಂದ ತುಲಾಭಾರ, ಪೂಜ್ಯರು ಬರೆದ ಪುಸ್ತಕಗಳ ಬಿಡುಗಡೆ, ಪ್ರಸಿದ್ಧ ಚಲನಚಿತ್ರ ಹಿನ್ನಲೆಗಾಯಕರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.
ದೇಶದ ವಿವಿಧ ಭಾಗಗಳ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯುವ ಈ ಸಮಾರಂಭಕ್ಕೆ ನಾಡಿನ ಹಿರಿಯ ಮಠಾಧೀಶರು, ಸಚಿವರು, ಶಾಸಕರು, ಸಾಹಿತಿಗಳು ಹಾಗೂ ಕಲಾವಿದರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಆಧ್ಯಾತ್ಮಿಕ ಲೋಕದಲ್ಲಿ ಆರೂಢ ಅವಸ್ಥೆಯನ್ನು ತಲುಪಿ, ಹಲವು ಲೀಲೆಗಳನ್ನು ತೋರಿ, ಭಕ್ತರನ್ನು ಉದ್ಧರಿಸಿದ ಶ್ರೀಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಪವಾಡಪುರುಷ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಮತ್ತು ಪ್ರಸ್ತುತ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನದ ಒಂದ ದಿನದ ಆಚರಣೆ ಪೂರ್ಣಗೊಳ್ಳುವುದು ಇಲ್ಲಿನ ವಿಶೇಷ ಎಂದರು.
ಈ ವಿಶೇಷ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಲು ಮಹಾದೇವ ಗಂವ್ಹಾರ ಕೋರಿದ್ದಾರೆ.