ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಜಿಲ್ಲೆ

ಕಲಬುರಗಿ: ಜಿಲ್ಲೆಯಲ್ಲಿ ನಿನ್ನೆಯಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ ಮತ್ತು ಪ್ರವಾಹ ಪೀಡಿತ ಗ್ರಾಮಗಳಲ್ಲಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪರಿಣಾಮ ಬೆಣ್ಣೆತೊರಾ ನದಿ ತುಂಬಿ ಹರಿಯುತ್ತಿದ್ದು, ಕಾಳಗಿ ಮತ್ತು ಚಿತ್ತಾಪುರ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ನೀರು ನುಗ್ಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸರ್ಕಾರಿ ಶಾಲೆಗಳು, ಸಮುದಾಯ ಭವನಗಳು ಸೇರಿದಂತೆ ದೇವಸ್ಥಾನಗಳನ್ನು‌ ಕಾಳಜಿ ಕೇಂದ್ರಗಳನ್ನಾಗಿ ಮಾಡಿ ಪ್ರವಾಹ ಪೀಡಿತ ಗ್ರಾಮಗಳ‌ ಜನರನ್ನು ಸುರಕ್ಷಿತವಾಗಿ ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕಾಳಗಿ ತಾಲೂಕಿನ ಹಳೆ ಹೆಬ್ಬಾಳ, ಕಣಸೂರು, ಕಲಗುರ್ತಿ ಮತ್ತು ಟೆಂಗಳಿ ಗ್ರಾಮಗಳಲ್ಲಿ ನೀರು ನುಗ್ಗಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಹದಿಂದ ನೀರು ನುಗ್ಗಿರುವ ಮನೆಗಳ ನಿವಾಸಿಗಳಿಗೆ ತೊಂದರೆಯಾಗದಂತೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು ಮತ್ತು ಬೆಡ್ ಶೀಟ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿದ್ದು, ನಿನ್ನೆ ತಡರಾತ್ರಿಯವರೆಗೆ ಸಿಇಓ ಭಂವರ್ ಸಿಂಗ್ ಮೀನಾ ಹಾಗೂ ಎಸ್’ಪಿ ಅಡ್ಡೂರು ಶ್ರೀನಿವಾಸಲು ಸ್ಥಳದಲ್ಲೇ ಇದ್ದು ಅಗತ್ಯ ಕ್ರಮವಹಿಸಿದ್ದಾರೆ. ತಾ.ಪಂ ಇಒ, ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರೆ ಸರ್ಕಾರಿ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಾರ್ವಜನಿಕರ ಸ್ಥಳಾಂತರ
ಬೆಣ್ಣೆತೊರಾ ನದಿ ನೀರು ನುಗ್ಗಿದ ಪರಿಣಾಮ ಹಳೆ ಹೆಬ್ಬಾಳ ಗ್ರಾಮದ ಸುಮಾರು 250 ಜನರನ್ನು ಹಾಗೂ ಕಣಸೂರು ಗ್ರಾಮದ ಸುಮಾರು 150 ಜನರನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಕಾಳಜಿ ಕೇಂದ್ರಗಳು
ಕಾಳಗಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಾದ ಹೆಬ್ಬಾಳ, ಕಣಸೂರು, ಕಲಗುರ್ತಿ, ಮಲಘಾಣ ಮತ್ತು ಟೆಂಗಳಿ ಗ್ರಾಮಗಳಲ್ಲಿ ನಿನ್ನೆ ರಾತ್ರಿಯಿಂದಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ, ಸಾರ್ವಜನಿಕರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಅವರಿಗೆ ಅಗತ್ಯ ನೆರವು ಒದಗಿಸಲಾಗಿದ್ದು, ಕುಡಿಯುವ ನೀರು, ರಾತ್ರಿಯ ಊಟ ಮತ್ತು ಇಂದು ಬೆಳಗಿನ ಉಪಹಾರ ಒದಗಿಸಲಾಗಿದೆ.

ನೋಡಲ್ ಅಧಿಕಾರಿಗಳು
ಪ್ರವಾಹ ಪೀಡಿತ ಗ್ರಾಮಗಳ ಜನರ ಸುರಕ್ಷತೆ ಹಾಗೂ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಲು ಮತ್ತು ಕಾಳಜಿ ಕೇಂದ್ರಗಳ ಉಸ್ತುವಾರಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು‌ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೆಬ್ಬಾಳ: ಅಣವೀರಭದ್ರೇಶ್ವರ ಸಮುದಾಯ ಭವನ ಹಾಗೂ ಹಿರಿಯ ಪ್ರಾಥಮಿಕ ಶಾಲೆ (ಕಾಳಜಿ ಕೇಂದ್ರಗಳು) ತಾಲೂಕು ನೋಡೆಲ್ ಆಫೀಸರ್: ಬಸಲಿಂಗಪ್ಪಾ ಡಿಗ್ಗಿ, ಮೊಬೈಲ್: 95907 09252.

ಕಣಸೂರು, ತಾಲೂಕು ನೋಡೆಲ್ ಆಫೀಸರ್: ಪಂಕಜಾ, ಮೊಬೈಲ್ : 94488 58285.

ಟೆಂಗಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ತಾಲೂಕು ನೋಡೆಲ್ ಆಫೀಸರ್: ಪ್ರಜ್ಞಾ ಎಇಇ, ಲೋಕೋಪಯೋಗಿ ಇಲಾಖೆ- ಮೊಬೈಲ್
9902120046.

ಕಾಳಗಿ ತಹಸೀಲ್ದಾರ ಪೃಥ್ವಿರಾಜ್ ಪಾಟೀಲ್- 99006 17871. ಚಿತ್ತಾಪುರ ತಹಸೀಲ್ದಾರ ನಾಗಯ್ಯ ಹಿರೇಮಠ- 99003 41212

ರಸ್ತೆ, ಬ್ರಿಜ್ ಬಂದ್
ಕಾಳಗಿ ತಾಲೂಕು ಕಣಸೂರ ಗ್ರಾಮದ ಬ್ರಿಡ್ಜ್ ಮೇಲೆ ನೀರು ಬಂದಿರುವ ಪ್ರಯುಕ್ತ ಕಲಬುರಗಿ – ಚಿಂಚೋಳಿ ( ಕಾಳಗಿ ಮಾರ್ಗವಾಗಿ) ರಸ್ತೆ ಸಂಪೂರ್ಣ ಬಂದಾಗಿರುತ್ತದೆ. ಜೊತೆಗೆ ಹೆಬ್ಬಾಳ, ಕಲಗುರ್ತಿ ಮತ್ತು ಟೆಂಗಳಿ ಬ್ರಿಜ್ ಗಳು ನದಿ ನೀರಿನಿಂದ ಮುಳುಗಿವೆ.

ಮನೆ ಹಾನಿ
ಮಳೆಯಿಂದ ಜಿಲ್ಲೆಯಲ್ಲಿ ಹಾಗೂ‌ ಕಾಳಗಿ ಮತ್ತು‌ ಚಿತ್ತಾಪುರ ತಾಲೂಕಿನಲ್ಲಿ ಮನೆಗಳಿಗೆ ಹಾನಿಯಾದ ಬಗ್ಗೆ ಪ್ರಾಥಮಿಕ ವರದಿಗಳಿವೆ. ಹೆಬ್ಬಾಳ ಗ್ರಾಮವೊಂದರಲ್ಲೇ ಸುಮಾರು 100 ಮನೆಗಳಿಗೆ ಹಾನಿ ಸಂಭವಿಸಿದೆ. ಹಾನಿಗೊಳಗಾದ ಮನೆಗಳ ತುರ್ತು ಸಮೀಕ್ಷೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಜಿಲ್ಲಾಧಿಕಾರಿ ಮತ್ತು ಸಿಇಒ ಅವರಿಗೆ ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ.

ಗುಂಡಗುರ್ತಿ ಗ್ರಾಮಕ್ಕೆ ನೀರು
ನದಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದ್ದು, ಸಧ್ಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದ್ದು ಸ್ಥಳಕ್ಕೆ ತಹಸೀಲ್ದಾರ, ಇಓ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ‌ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ ಗ್ರಾಮಸ್ಥರಿಗೆ ಅಗತ್ಯ ಅನುಕೂಲ ಮಾಡಿಕೊಡಲಾಗಿದೆ.

ಜೊತೆಗೆ ದಂಡೋತಿ, ಕದ್ದರಗಿ ಮತ್ತು ಮುಗಟಾ ಗ್ರಾಮದ ಬಳಿ ಇರುವ ಸೇತುವೆಗಳು ಮುಳುಗಡೆಯ ಭೀತಿ ಎದುರಿಸುತ್ತಿದ್ದು ಸಾರ್ವಜನಿಕರಿಗಾಗಿ ಸೂಕ್ತ ಕ್ರಮವಹಿಸಲಾಗಿದೆ.

ಎಚ್ಚರಿಕೆ ಕ್ರಮ
ಪ್ರವಾಹ ಎದುರಿಸುತ್ತಿರುವ ನದಿ ಪಾತ್ರದ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ನದಿಯ ಹತ್ತಿರ ಹೋಗದಂತೆ ತಡೆಯಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಬ್ರಿಜ್ ಗಳಿಗೆ ಅಡ್ಡಲಾಗಿ ಬ್ಯಾರಿಕೇಟ್ ಹಾಕಿ‌ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಗ್ರಾಮಗಳಲ್ಲಿ ಡಂಗೂರು ಸಾರುವ ಮೂಲಕ ಸಾರ್ವಜನಿಕರ ಎಚ್ಚರಿಕೆ ನೀಡಲಾಗಿದೆ.

ಜಿಲ್ಲಾಧಿಕಾರಿಗೆ ಸೂಚನೆ
ಮಳೆ ಮತ್ತು ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಆಗಿರುವ ನಷ್ಟವನ್ನು ಅಂದಾಜು ಮಾಡಿ ವರದಿ ಕಳುಹಿಸಲು ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿ, ಸಿಇಒ ಮತ್ತು ಎಸ್’ಪಿ ಸೇರಿದಂತೆ ಸಂಬಂಧಪಟ್ಟ ತಹಸೀಲ್ದಾರ್, ಇಓ ಮತ್ತು ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಸ್ಥಳಗಳಲ್ಲಿ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೆ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿವನ್ನು ಸಜ್ಜುಗೊಳಿಸಲಾಗಿದೆ. ಸಾರ್ವಜನಕರು ತುರ್ತು ಸಂದರ್ಭದಲ್ಲಿ ಮೊಬೈಲ್/ ದೂರವಾಣಿ ಮೂಲಕ‌ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *