1 ರೂ. ಹೆಚ್ಚು ಪಡೆದು 30 ಸಾವಿರ ದಂಡ ತೆತ್ತ KSRTC

ರಾಜ್ಯ

ಬೆಂಗಳೂರು: ಬಸ್​ಗಳಲ್ಲಿ ಕಂಡಕ್ಟರ್​ ಬಳಿಯಿಂದ ಚೇಂಜ್​ ಪಡೆದುಕೊಳ್ಳುವುದು ಎಷ್ಟು ಕಷ್ಟ ಎನ್ನುವುದು ಬಹುತೇಕ ಪ್ರಯಾಣಿಕರಿಗೆ ಅರಿವಿದೆ. ಕೆಲವು ಸಂದರ್ಭದಲ್ಲಿ ಚೇಂಜ್​ ಸಮಸ್ಯೆ ಇರುವುದು ನಿಜವಾದರು, ಕೆಲವೊಮ್ಮೆ ಚೇಂಜ್​ ಇದ್ದರು ಇಳಿಯುವಾಗ ಕೊಡುತ್ತೆನೆ ಎಂದು ಇಳಿಯುವ ಸಂದರ್ಭದಲ್ಲಿ ಕಂಡಕ್ಟರ್​ ನಾಪತ್ತೆಯಾಗುವುದು ಪ್ರಯಾಣಿಕರಿಗೆ ತಿಳಿಯದ ವಿಷಯವೆನಲ್ಲ.

ಪ್ರಯಾಣಿಕರು ಮರೆತರೂ ಅವರಿಗೆ ಚೇಂಜ್​ ಕೊಟ್ಟು ಕಳುಹಿಸುವ ಪ್ರಾಮಾಣಿಕ ಕಂಡಕ್ಟರ್​ಗಳು ಇದ್ದಾರೆ.

ಇದು ಕಂಡಕ್ಟರ್​ಗಳ ಮಾತಾದರೆ, ಇನ್ನು ಕೆಎಸ್​ಆರ್​ಟಿಸಿ ಒಂದು ರೂಪಾಯಿ ಹೆಚ್ಚು ಪಡೆದು, ಭಾರಿ ದಂಡವನ್ನು ಕಟ್ಟುವ ಸ್ಥಿತಿಗೆ ಬಂದಿರುವ ಕುತೂಹಲದ ವಿಷಯವೊಂದು ನಡೆದಿದೆ. ಅಷ್ಟಕ್ಕೂ ಇದೀಗ ಒಂದು ಕಡೆ ಸ್ತ್ರೀಯರಿಗೆ ಉಚಿತ ಎಂದು ಹೇಳಿ, ಇನ್ನೊಂದೆಡೆ ಬಸ್​ ದರಗಳನ್ನು ದುಪ್ಪಟ್ಟು ಮಾಡಿರುವುದು, ಬೇರೆ ಊರುಗಳಿಗೆ ಇದ್ದ ರಾಜಹಂಸ ಬಸ್ಸುಗಳನ್ನು ತೆಗೆದು ಸ್ಲೀಪರ್​ ಕೋಚ್​ ಬಸ್​ಗಳನ್ನಷ್ಟೆ ಹಾಕಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಎಲ್ಲರಿಗೂ ತಿಳಿದದ್ದೆ. ಆದರೆ ಈ ಪ್ರಕರಣದಲ್ಲಿ 1 ರೂ ಹೆಚ್ಚಿಗೆ ಟಿಕೆಟ್​ ವಸೂಲಿ ಮಾಡಿದ ಕಾರಣಕ್ಕೆ, ಪ್ರಯಾಣಿಕರೊಬ್ಬರು ಪಟ್ಟು ಬಿಡದೆ ಗ್ರಾಹಕರ ಕೋರ್ಟ್​ಗೆ ಹೋಗಿ ಜಯ ಸಾಧಿಸಿದ್ದಾರೆ. ಮೈಸೂರು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) 30 ಸಾವಿರ ರೂ ದಂಡ ವಿಧಿಸಿದೆ.

ಚಾಮರಾಜನಗರದ ಹೂಗ್ಯ ಗ್ರಾಮದ ನಿವಾಸಿ, ಮೈಸೂರು ಮೂಲದ ವಕೀಲ ಜೆ ಕಿರಣಕುಮಾರ, ಡಿಸೆಂಬರ್ 31, 2024 ರಂದು ಮೈಸೂರಿನಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಐರಾವತ ಮಲ್ಟಿ-ಆಕ್ಸಲ್ ಬಸ್‌ನಲ್ಲಿ ಪ್ರಯಾಣಿಸಿದ್ದರು. ಯುಪಿಐ ವಹಿವಾಟಿನ ಮೂಲಕ 390 ರೂ. ಪಾವತಿಸಿದ್ದರು. ಅಸಲಿಗೆ ಮೂಲ ದರ 370 ರೂ, ಜಿಎಸ್‌ಟಿ 19 ರೂ ಇತ್ತು. ಅಂದರೆ 389 ರೂ ಟಿಕೆಟ್​ ದರ. ಆದರೆ ಚೇಂಜ್​ ಸಮಸ್ಯೆಯಿಂದಲೋ ಏನೋ ಸಾಮಾನ್ಯವಾಗಿ ಎಲ್ಲಾ ಕಡೆ ಮಾಡುವಂತೆ ಕೆಎಸ್​ಆರ್​ಟಿಸಿ ರೌಂಡ್​ ಆಫ್​ ಫಿಗರ್​ ಎಂದು 1 ರೂ ಸೇರಿಸಿ 390 ರೂ ಟಿಕೆಟ್​ ದರ ಮಾಡಿದೆ ಇದು ವಕೀಲರನ್ನು ಕೆರಳಿಸಿದೆ.

ಹೀಗೆ ಒಬ್ಬೊಬ್ಬರಿಂದ ಒಂದೊಂದು ರೂ ಎಂದರೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಎಷ್ಟು ಅನ್ಯಾಯ ಮಾಡುತ್ತಿದೆ ಎನ್ನುವುದು ಅವರ ಪ್ರಶ್ನೆ. ಅಷ್ಟಕ್ಕೂ ಯುಪಿಐ ಪಾವತಿಯಾಗಿದ್ದರಿಂದ ಚೇಂಜ್​ ಅವಶ್ಯಕತೆ ಬೀಳುವುದಿಲ್ಲ. ಈ ಸಮಸ್ಯೆ ಪರಿಹಾರಕ್ಕಾಗಿಯೇ UPI ವ್ಯವಸ್ಥೆ ಮಾಡಿದ್ದರೂ, ವಿನಾಕಾರಣ 1 ರೂ ಹೆಚ್ಚಿಗೆ ಪಡೆಯುತ್ತಿರುವುದು ಸರಿಯಲ್ಲ ಎಂದು ಮೈಸೂರಿನ ಗ್ರಾಹಕರ ಕೋರ್ಟ್​ಗೆ ಅವರು ದೂರು ಸಲ್ಲಿಸಿದ್ದರು.

ಕೆಎಸ್‌ಆರ್‌ಟಿಸಿ ಪ್ರತಿದಿನ ಸುಮಾರು 35 ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತದೆ, ಇದರಲ್ಲಿ 3.44 ಲಕ್ಷಕ್ಕೂ ಹೆಚ್ಚು ಐಷಾರಾಮಿ ಬಸ್ ಪ್ರಯಾಣಿಕರು ಸೇರಿದ್ದಾರೆ ಎಂದು ಅವರು ಗಮನಸೆಳೆದರು. ಮಾಸಿಕ ಅಂದಾಜಿನ ಆಧಾರದ ಮೇಲೆ ಪ್ರತಿ ತಿಂಗಳು 1 ಕೋಟಿಗೂ ಹೆಚ್ಚು ಪ್ರಯಾಣಿಕರು ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ವಾರ್ಷಿಕವಾಗಿ ಈ ಸಂಖ್ಯೆ 12 ಕೋಟಿ ತಲುಪುತ್ತದೆ. “ಪ್ರತಿ ಐಷಾರಾಮಿ ಬಸ್ ಪ್ರಯಾಣಿಕರಿಂದ 1 ರೂ ಹೆಚ್ಚುವರಿಯಾಗಿ ಸಂಗ್ರಹಿಸುವ ಮೂಲಕ ಅನ್ಯಾಯದ ಕಾರ್ಯವಿಧಾನದ ಮೂಲಕ ಕೆಎಸ್‌ಆರ್‌ಟಿಸಿ ವರ್ಷಕ್ಕೆ ಸುಮಾರು 12.39 ಕೋಟಿ ರೂ. ಗಳಿಸುತ್ತದೆ” ಎಂದು ಕಿರಣ್ ಆರೋಪಿಸಿದರು.

ಇದನ್ನು ಕೋರ್ಟ್​ ಗಂಭೀರವಾಗಿ ಪರಿಗಣಿಸಿತು. ಆದ್ದರಿಂದ ಹೆಚ್ಚುವರಿಯಾಗಿ ಪಡೆದ 1 ರೂ ಹಾಗೂ ದೂರುದಾರರಿಗೆ ಆಗಿರುವ ಮಾನಸಿಕ ನೋವಿಗೆ 25,000 ರೂ. ಪರಿಹಾರ ಮತ್ತು ನ್ಯಾಯಾಲಯದ ವೆಚ್ಚವಾಗಿ 5,000 ರೂ. ಪಾವತಿಸುವಂತೆ ಆದೇಸಿಸಿದೆ. ಒಂದು ತಿಂಗಳೊಳಗೆ 30,001 ರೂ. ಪಾವತಿಸಲು ಕೆಎಸ್‌ಆರ್‌ಟಿಸಿಗೆ ವೇದಿಕೆ ನಿರ್ದೇಶಿಸಿದೆ. ಇದೆ ಆದೇಶ ಇಟ್ಟುಕೊಂಡು ಹೆಚ್ಚು ಪಡೆದವರೆಲ್ಲಾ ವೇದಿಕೆಯ ಮೊರೆ ಹೋದರೆ ಸಾರಿಗೆ ಸಂಸ್ಥೆ ಕಥೆ ಅಷ್ಟೆ.

Leave a Reply

Your email address will not be published. Required fields are marked *