ಬೀದರ್: 3ನೇ ಮಹಡಿಯಿಂದ ತಳ್ಳಿ ಮಲ ಮಗಳನ್ನು ಕೊಲೆ ಮಾಡಿದ ಮಹಿಳೆ

ಜಿಲ್ಲೆ

ಬೀದರ್: ಆಟ ಆಡಿಸುವ ನೆಪದಲ್ಲಿ ಮಲ ಮಗಳನ್ನು ಟೆರೇಸ್ ಮೇಲೆ ಕರೆದುಕೊಂಡು ಹೋಗಿ ಮೂರನೇ ಮಹಡಿಯಿಂದ ಮಲತಾಯಿ ತಳ್ಳಿ ಕೊಲೆ ಮಾಡಿದ ಅಮಾನವೀಯ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ.

7 ವರ್ಷದ ಸಾನ್ವಿ ಮೃತ ಬಾಲಕಿ (ಮಲಮಗಳು) ಹಾಗೂ ಆರೋಪಿಯನ್ನು ರಾಧಾ (ಮಲತಾಯಿ) ಎಂದು ಗುರುತಿಸಲಾಗಿದೆ.

ಆ.27ರಂದು ಮಲತಾಯಿ ರಾಧಾ ಬಾಲಕಿಗೆ (ಮಲಮಗಳು) ಆಟ ಆಡಿಸುವ ನೆಪದಲ್ಲಿ 3ನೇ ಮಹಡಿಗೆ ಕರೆದುಕೊಂಡು ಹೋಗಿದ್ದಳು. ಆ ವೇಳೆ ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಳು. ಎಲ್ಲರಿಗೂ ಸಾನ್ವಿ ಆಯತಪ್ಪಿ ಬಿದ್ದಳು ಎಂದು ನಂಬಿಸಿದ್ದರು. ಆ.28ರಂದು ಮೃತ ಬಾಲಕಿ ತಂದೆ ಸಿದ್ಧಾಂತ ಗಾಂಧಿಗಂಜ್ ಠಾಣೆಯಲ್ಲಿ ಆಕಸ್ಮಿಕ ಸಾವು ದೂರು ನೀಡಿದ್ದರು.

ಸೆ.12ರಂದು ಮೃತ ಬಾಲಕಿ ತಂದೆ ಸಿದ್ಧಾಂತಗೆ ಪಕ್ಕದ ಮನೆಯವರು ವಿಡಿಯೋವೊಂದನ್ನು ಕಳುಹಿಸಿದ್ದರು. ವಿಡಿಯೋದಲ್ಲಿ ಬಾಲಕಿ ಸಾವನ್ನಪ್ಪಿದ ದಿನ ಆಕೆಯ ಜೊತೆ ಮಲತಾಯಿ ರಾಧಾ ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯ ನೋಡಿದಾಗ ವಿಷಯ ಬಹಿರಂಗವಾಗಿದ್ದು, ವಿಡಿಯೋ ಆಧರಿಸಿ ಬಾಲಕಿಯ ಅಜ್ಜಿ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಸಾನ್ವಿ ತಾಯಿ ಖಾಯಿಲೆಗೆ ತುತ್ತಾಗಿ 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಬಳಿಕ 2023ರಲ್ಲಿ ರಾಧಾ ಜೊತೆ ಸಿದ್ಧಾಂತ ಎರಡನೇ ವಿವಾಹವಾಗಿದ್ದು, ಅವರಿಗೆ ಎರಡು ಅವಳಿ ಮಕ್ಕಳಿವೆ. ಹೀಗಾಗಿ ಸಿದ್ಧಾಂತನ ಮೊದಲ ಮಗುವನ್ನು ಎರಡನೇ ಪತ್ನಿ ರಾಧಾ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿದ್ದಾರೆ. ವಿಚಾರಣೆಗೊಳಪಡಿಸಿದಾಗ ಆಸ್ತಿ ಇಬ್ಭಾಗ ಆಗುತ್ತದೆ ಎಂದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Leave a Reply

Your email address will not be published. Required fields are marked *