ಭಾರತದ ಮಾರುಕಟ್ಟೆಗೆ ಚೀನಾದ ಬೆಳ್ಳುಳ್ಳಿ ಆಗಾಗ್ಗೆ ಲಗ್ಗೆ ಇಟ್ಟು ಸದ್ದು ಮಾಡುತ್ತಲೆ ಇರುತ್ತದೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಬೆಳ್ಳುಳ್ಳಿ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಇಡಿ ವಿಶ್ವಕ್ಕೆ ಕರೋನಾ ಕೊಟ್ಟಿರುವ ಚೀನಾ ಮಾಡುತ್ತಿರುವ ಕಿತಾಪತಿ ಒಂದಲ್ಲ, ಎರಡಲ್ಲ.
ಚೀನಾದ ಮಾಲ್ ಎಂದರೆ ಅದು ಡೇಂಜರಸ್ ಎನ್ನುವುದು ಗೊತ್ತಿರುವ ವಿಷಯ. ಇದೀಗ ಚೀನಾದ ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಲಗ್ಗೆ ಇಟ್ಟಿದೆ. ಈ ಹಿಂದೆ ಇದೆ ರೀತಿ ಮಾರುಕಟ್ಟೆಗೆ ಬಂದಿದ್ದ ಬೆಳ್ಳುಳ್ಳಿ ಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗಿತು. ಅದರ ಹೊರತಾಗಿ ಮತ್ತೊಮ್ಮೆ ಈಗ ಚೀನಾ ಬೆಳ್ಳುಳ್ಳಿ ಕಾಲಿಟ್ಟಿದೆ. ಅಷ್ಟಕ್ಕೂ ಚೀನಾ ವಿಶ್ವದ ಅತಿ ದೊಡ್ಡ ಬೆಳ್ಳುಳ್ಳಿ ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯಲ್ಲಿ 80% ನಷ್ಟು ಪಾಲು ಹೊಂದಿದೆ. ಇದರ ದೊಡ್ಡ ಪ್ರಮಾಣದ ಉತ್ಪಾದನೆಯಿಂದಾಗಿ, ಭಾರತದಲ್ಲಿ 2014ರಿಂದ ಚೀನಿ ಬೆಳ್ಳುಳ್ಳಿ ಆಮದನ್ನು ನಿಷೇಧಿಸಲಾಗಿದೆ.
ಮೊದಲೆ ಹೇಳಿದಂತೆ ವಿಶ್ವದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯಲ್ಲಿ 80% ನಷ್ಟು ಪಾಲು ಹೊಂದಿದೆ. ಅಲ್ಲಿ ಆಧುನಿಕ ಕೃಷಿ ತಂತ್ರಗಳನ್ನು ಬಳಸಿಕೊಂಡು ಇವುಗಳನ್ನು ಬೆಳೆಯಲಾಗುತ್ತದೆ. ಆದರೆ ವಿಪರೀತ ಪ್ರಮಾಣದಲ್ಲಿ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಸಿಂಪಡಣೆ ಮಾಡಲಾಗುತ್ತದೆ. ಇದೆ ಕಾರಣಕ್ಕೆ 2014ರಲ್ಲಿ ಭಾರತ ಇದರ ಆಮದನ್ನು ನಿಷೇಧಿಸಿತ್ತು. ಇದರ ಹೊರತಾಗಿ ವಿವಿಧ ದೇಶಗಳ ಮೂಲಕ ಅರ್ಥಾತ್ ನೇಪಾಳ, ಮ್ಯಾನ್ಮಾರ್, ಭೂತಾನ್ ಕಳ್ಳ ಮಾರ್ಗವಾಗಿ ದೇಶ ಮತ್ತು ರಾಜ್ಯಕ್ಕೆ ಚೀನಾ ಬೆಳ್ಳುಳ್ಳಿ ಬರುತ್ತಿದೆ.
ಸಾಮಾನ್ಯವಾಗಿ ಬೆಳ್ಳುಳ್ಳಿ ಖರೀದಿ ಮಾಡುವಾಗ ಅದರ ಬಗ್ಗೆ ಗಮನ ಕೊಡಲು ಹೋಗುವುದಿಲ್ಲ. ಕೆಲವೊಮ್ಮೆ ಕಡಿಮೆ ರೇಟ್ನಲ್ಲಿ ಸಿಕ್ಕಿಬಿಟ್ಟಿತು ಎನ್ನುವ ಕಾರಣಕ್ಕೆ ಅದನ್ನು ಖರೀದಿ ಮಾಡುವುದು ಇದೆ. ಅಷ್ಟಕ್ಕೂ ಬೆಳ್ಳುಳ್ಳಿಯಿಂದ ಅಪಾರ ಪ್ರಯೋಜನಗಳಿವೆ. ಹೃದಯ ರೋಗದ ಸಮಸ್ಯೆಯಿಂದ ಹಿಡಿದು ಹಲವು ಕಾಯಿಲೆಗಳಿಗೆ ಬೆಳ್ಳುಳ್ಳಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಹಾಗೆಂದು ಅದು ಭಾರತದ ಬೆಳ್ಳುಳ್ಳಿ ಮಾತ್ರ. ಆದರೆ ಚೀನಾದ ಬೆಳ್ಳುಳ್ಳಿ ತಿಂದರೆ ಕ್ಯಾನ್ಸರ್ನಂಥ ಮಹಾಮಾರಿ ಬರಬಹುದು ಎಂದು ಎಚ್ಚರಿಸುತ್ತಾರೆ ತಜ್ಞರು.
ಕಳೆದ ವರ್ಷ ಚೀನಾದ ಬೆಳ್ಳುಳ್ಳಿಯಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾಗಿದ್ದು, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಯಕೃತ್ತಿನ ಹಾನಿ, ಜಠರಗರುಳಿನ ಸಮಸ್ಯೆ, ರೋಗನಿರೋಧಕ ಶಕ್ತಿ ಕುಗ್ಗುವ ಸಮಸ್ಯೆಗಳು ಕಂಡು ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು.
ದೀರ್ಘಕಾಲದ ವರೆಗೆ ಈ ರೀತಿಯ ಬೆಳ್ಳುಳ್ಳಿ ಬಳಸಿದ್ದೆಯಾದಲ್ಲಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಚೀನಾದ ಬೆಳ್ಳುಳ್ಳಿಯನ್ನು ಆರು ತಿಂಗಳವರೆಗೆ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಲು ಮೀಥೈಲ್ ಬ್ರೋಮೈಡ್ ಹೊಂದಿರುವ ಶಿಲೀಂಧ್ರನಾಶಕದೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಚೀನಿ ಬೆಳ್ಳುಳ್ಳಿ ಹಾನಿಕಾರಕ ಕ್ಲೋರಿನ್ ಬಳಸಿ ಬಿಳುಪುಗೊಳಿಸಲಾಗುತ್ತದೆ ಎನ್ನಲಾಗಿದೆ. ಹಾಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಭಾರತ ಮತ್ತು ಚೀನಾದ ಬೆಳ್ಳುಳ್ಳಿಗಳಲ್ಲಿ ಕೆಲವೊಂದು ವ್ಯತ್ಯಾಸಗಳು ಇವೆ.
ಚಿತ್ರದಲ್ಲಿ ತೋರಿಸಿರುವಂತೆ, ಚೀನಾದ ಗಾತ್ರ ಮತ್ತು ಬಣ್ಣ: ಚೀನಾದ ಬೆಳ್ಳುಳ್ಳಿ ಚಿಕ್ಕದಾಗಿರುತ್ತದೆ, ತಿಳಿ ಬಿಳಿ ಮತ್ತು ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಹೊಳೆಯುವ ರೀತಿ ಇರುತ್ತದೆ. ಇದನ್ನು ನಾಟಿ ಬೆಳ್ಳುಳ್ಳಿ ಎಂದು ಕೆಲವೊಮ್ಮೆ ಮಾರಾಟಗಾರರು ನೀಡುವುದು ಇದೆ. ಭಾರತದ ಬೆಳ್ಳುಳ್ಳಿ ದೊಡ್ಡದಾಗಿರುತ್ತದೆ. ಇದು ಹಳದಿ ಅಥವಾ ಕೆನೆ ಬಣ್ಣದ ಛಾಯೆ ಮತ್ತು ದಪ್ಪವಾದ ಚರ್ಮ ಹೊಂದಿರುತ್ತದೆ. ಆದ್ದರಿಂದ ಖರೀದಿ ಮಾಡುವಾಗ ಇದನ್ನು ನೋಡಬೇಕಿದೆ.
ಭಾರತೀಯ ಬೆಳ್ಳುಳ್ಳಿ ಬಲವಾದ ಸುವಾಸನೆ ಹೊಂದಿರುತ್ತದೆ. ಆದರೆ ಚೀನಾ ಬೆಳ್ಳುಳ್ಳಿ ಹೆಚ್ಚು ಸೌಮ್ಯವಾದ ಪರಿಮಳವನ್ನು ಹೊಂದಿರುತ್ತದೆ. ಭಾರತದ ಬೆಳ್ಳುಳ್ಳಿಯಲ್ಲಿ ಗಡ್ಡೆ ಇರುತ್ತದೆ, ಚೀನಾದ ಬೆಳ್ಳುಳ್ಳಿಯಲ್ಲಿ ಅದು ಕಾಣಸಿಗುವುದಿಲ್ಲ.
ಸಂಪೂರ್ಣ ಡಿಟೇಲ್ಸ್ ಈ ವಿಡಿಯೋದಲ್ಲಿದೆ ನೋಡಿ