ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ: ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

ರಾಜ್ಯ

ಬೆಂಗಳೂರು: ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಚಾಲಕನಿಗೆ ತಾಯಿಯೊಬ್ಬಳು ಬಟ್ಟೆ ಬಿಚ್ಚಿ ಥಳಿಸಿದ ಘಟನೆ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಲೀಪರ್‌ ಬಸ್ಸಿನಲ್ಲಿ 15 ವರ್ಷದ ಬಾಲಕಿ ಹೊರಟಿದ್ದಳು. ರಾತ್ರಿ ಮೊಬೈಲಿನ ಚಾರ್ಜ್‌ ಖಾಲಿಯಾಗಿದ್ದರಿಂದ ಚಾಲಕನ ಬಳಿ ಚಾರ್ಜ್‌ ಹಾಕುವಂತೆ ಹೇಳಿದ್ದಳು.

ಸ್ವಲ್ಪ ಹೊತ್ತಾದ ನಂತರ ಬಾಲಕಿ ಮೊಬೈಲ್‌ ಕೊಡುವಂತೆ ಕೇಳಿದಾಗ ಸಹ ಚಾಲಕ ಆರೀಫ್‌ ಮುತ್ತು ಕೊಟ್ಟರೆ ಮಾತ್ರ ನೀಡುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ಮಲಗಿದ್ದಾಗ ಸೀಟ್‌ ಬಳಿ ಬಂದು ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದರೂ ರಾತ್ರಿ ಪದೆ ಪದೆ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಕಿರುಕುಳ ತಾಳಲಾರದೆ ಬಾಲಕಿ ಕರೆ ಮಾಡಿ ತನ್ನ ತಾಯಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಇಂದು ಬೆಳಗ್ಗೆ ಬಸ್ಸು ಬಸವೇಶ್ವರನಗರಕ್ಕೆ ಬರುತ್ತಿದ್ದಂತೆ ಆರೀಫ್‌ನನ್ನು ಕೆಳಗೆ ಇಳಿಸಿ ತಾಯಿ ಮತ್ತು ಆಕೆಯ ಸಹೋದರ ಪ್ರಶ್ನಿಸಿದ್ದಾರೆ. ಈ ವೇಳೆ ಆರೀಫ್‌ ಕೈ ಮುಗಿದು ತಪ್ಪಾಗಿದೆ ಎಂದು ಹೇಳಿದ್ದಾನೆ. ನಂತರ ಈತನ ಬಟ್ಟೆಯನ್ನು ಬಿಚ್ಚಿ ಚೆನ್ನಾಗಿ ಹೊಡೆದಿದ್ದಾರೆ. ಆತ ಧರಿಸಿದ್ದ ಎಲ್ಲಾ ಬಟ್ಟೆ ತೆಗೆದು ಬೆತ್ತಲೆಗೊಳಿಸಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತಾಯಿಯನ್ನು ತಡೆದು ಆತನನ್ನು ವಶಕ್ಕೆ ಪಡೆದರು.

ಮಾಧ್ಯಮಗಳ ಜೊತೆ ಮಾತನಾಡಿದ ಬಾಲಕಿಯ ತಾಯಿ, ಹೈದರಾಬಾದ್‌ನಲ್ಲಿರುವ ನನ್ನ ಮಗಳ ಮನೆಗೆ ಇವಳು ಹೋಗಿದ್ದಳು. ರಾತ್ರಿ ಮಗಳು ಫೋನ್‌ ಮಾಡಿ ತಂಗಿಯನ್ನು ಬಸ್ಸಿನಲ್ಲಿ ಹತ್ತಿಸಿದ್ದೆನೆ ಎಂದು ಹೇಳಿದ್ದಳು. ಆದರೆ ಈತ ಮಗಳಿಗೆ ಬಸ್ಸಿನಲ್ಲಿ ಕೊಡಬಾರದ ಕಿರುಕುಳ ನೀಡಿದ್ದಾನೆ. ಅದನ್ನು ಇಲ್ಲಿ ಹೇಳಲು ಅಸಹ್ಯವಾಗುತ್ತಿದೆ. ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೋ ಗೊತ್ತಿಲ್ಲ. ನಾನು ಮಾತ್ರ ಈತನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

Leave a Reply

Your email address will not be published. Required fields are marked *