ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ: ಸಚಿವ ಪ್ರಿಯಾಂಕ್‌ ಖರ್ಗೆ

ರಾಜ್ಯ

ಬೆಂಗಳೂರು: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು, ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಸಮಗ್ರ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ವಿಧಾನಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆಯಡಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಹಾಗೂ ಬಿಜೆಪಿಯ ಡಿ.ಎಸ್‌ ಅರುಣ್‌ ಅವರ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನಡೆಸುವ ವಿಷಯದ ಬಗ್ಗೆ ಉತ್ತರ ನೀಡಿದರು.

ಸ್ಥಳೀಯ ಸಂಸ್ಥೆಗಳಿಗೆ ಬೇಗ ಚುನಾವಣೆ ನಡೆಯಬೇಕು ಎಂಬುದನ್ನು ನಾನೂ ಒಪ್ಪುತ್ತೆನೆ. ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಂಡು, ಕಗ್ಗಂಟು ಸರಿಪಡಿಸಿಕೊಂಡು ಮೀಸಲಾತಿಯನ್ನು ಪ್ರಕಟಿಸುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರ ಚುನಾವಣೆ ನಡೆಸಲಾಗುತ್ತದೆ ಎಂದರು.

ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಐದು ವರ್ಷದಲ್ಲಿ ಒಂದೂವರೆ ವರ್ಷ ಚುನಾವಣೆ ಪ್ರಕ್ರಿಯೆಯಲ್ಲೇ ಮುಗಿದುಹೋಗುತ್ತದೆ. ಕೆಲಸಗಳು ಆಗುವುದಿಲ್ಲ. ಒಂದೆ ಬಾರಿಗೆ ಮೂರು ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು ಎಂದು ಮಂಜುನಾಥ ಭಂಡಾರಿ ಒತ್ತಾಯಿಸಿದರು.

ಒಂದೆ ಬಾರಿ ಚುನಾವಣೆ ನಡೆಯುವುದಕ್ಕೆ ಕಾಯ್ದೆಗೆ ತಿದ್ದುಪಡಿ ತರಬೇಕೆ ? ಸಂವಿಧಾನಕ್ಕೆ ತಿದ್ದುಪಡಿಯಾಗಬೇಕೆ ? ಎಂಬುದರ ಬಗ್ಗೆ ಅಧ್ಯಯನದ ಅಗತ್ಯವಿದೆ. ಕೇರಳದಲ್ಲಿ ಏಕ ಕಾಲದಲ್ಲಿ, ಐದು ವರ್ಷಕ್ಕೆ ಸರಿಯಾಗಿ ಚುನಾವಣೆ ನಡೆಯುತ್ತಿದೆ ಎಂದು ಹೇಳಿದ್ದಿರಿ. ಎಲ್ಲವನ್ನೂ ಪರಿಶೀಲಿಸಿ, ವರದಿ ಸಲ್ಲಿಸಲು ಸಮಿತಿ ರಚಿಸಲಾಗುತ್ತದೆ ಎಂದು ಪ್ರಿಯಾಂಕ್‌ ಹೇಳಿದರು.

ತಾಲೂಕು ಪಂಚಾಯಿತಿ ಕೈಬಿಡಬೇಕೆಂದು ಕೆಲವರು ಸಲಹೆ ನೀಡುತ್ತಿದ್ದಾರೆ. ಪಂಚಾಯಿತಿಗಳು ಸರಳೀಕರಣವಾಗಿ, ಸಬಲೀಕರಣವಾಗಬೇಕು. ಸದಸ್ಯರ ಗೌರವಧನ ಹೆಚ್ಚಿಸಲು ಆರ್ಥಿಕ ಇಲಾಖೆಗೆ ಹೋಗಿದ್ದ ಪ್ರಸ್ತಾವ ವಾಪಸ್‌ ಬಂದಿದೆ. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಗೆ ಚುನಾವಣೆ ಮಾಡಿದರಷ್ಟೆ ಸಾಲದು, ಆಡಳಿತಾತ್ಮಕ ಅಧಿಕಾರ ಕೊಡಬೇಕು. ಎಲ್ಲದ್ದಕ್ಕೂ ಸರ್ಕಾರವನ್ನೇ ಕೇಳಬೇಕು ಎಂಬ ಪರಿಸ್ಥಿತಿ ಇದೆ. ಬರಿ ಚುನಾವಣೆ ಮಾಡಿ, ಕೈ ಕಟ್ಟಬೇಡಿ ಎಂದು ಕಾಂಗ್ರೆಸ್‌ನ ಬಲ್ಕೀಸ್‌ ಬಾನು ಹೇಳಿದರು.

Leave a Reply

Your email address will not be published. Required fields are marked *