ಕಲಬುರಗಿ: ಪರಿಸರ ಹಾಗೂ ವೈಚಾರಿಕತೆ ಪರ ಬರಹಗಳ ಮೂಲಕ ಅಸಂಖ್ಯಾತ ವ್ಯಕ್ತಿಗಳನ್ನು ಪ್ರಭಾವಿಸಿದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರು, ನಾಡು-ನುಡಿ ಏಳಿಗೆಗೆ ತಮ್ಮದೆಯಾದ ವಿಶಿಷ್ಟ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಮೇರು ಸಾಹಿತಿಯಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು.
ಶಹಾಬಾದ ತಾಲೂಕಿನ ಭಂಕೂರ್ ಗ್ರಾಮದ ಗಣೇಶ್ ನಗರದಲ್ಲಿನ ಕೋರಿಸಿದ್ದೇಶ್ವರ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಸಾಯಂಕಾಲ ಜರುಗಿದ ‘ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ 87ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ತೇಜಸ್ವಿಯವರು ನವ್ಯ ಸಾಹಿತ್ಯ ಉತ್ಕರ್ಷ ಸ್ಥಿತಿಯಲ್ಲಿದ್ದ ಕಾಲದಿಂದ ಬಂಡಾಯದ ಕಾಲಾವಧಿಯಲ್ಲಿ ಔಧ್ಯಮಿಕ ಆವಿಷ್ಕಾರದ ಹಿನ್ನಲೆಯಲ್ಲಿ ಸಮಾಜದ ನಿರ್ವೀರ್ಯ ಮೌಲ್ಯಗಳ ಪರಿಸರದಲ್ಲಿ ಅನನ್ಯ ಸಾಹಿತ್ಯ ಕಲೆಗಾರರಾಗಿ ಬೆಳೆದರು. ಅವರು ರಚಿಸಿರುವ ಕೃತಿಗಳಲ್ಲಿ ಆಳ ಮತ್ತು ಸಂಕೀರ್ಣತೆಯನ್ನು ಕಾಣಬಹುದಾಗಿದೆ. ಮೂಢನಂಬಿಕೆಗಳು, ಶೋಷಣೆಗಳು, ಸಭ್ಯತೆ ಸೋಗಿನ ಬಗೆಗೆ ಬಂಡಾಯದ ಅಂಶಗಳನ್ನು ಅವರು ರಚಿಸಿದ ನಾಟಕ ಹಾಗೂ ಕಥಾ ಸಾಹಿತ್ಯ ಕೃತಿಗಳಲ್ಲಿ ಕಂಡುಬರುತ್ತವೆ. ನಿಸರ್ಗ, ನಾಗರೀಕತೆ, ಮಾನವೀಯ ಮೌಲ್ಯಗಳು, ತತ್ವಜ್ಞಾನದ ಚಿಂತನೆಗಳುಳ್ಳ ತೇಜಸ್ವಿಯವರ ಬರಹಗಳ ಅಧ್ಯಯನ ಅಗತ್ಯವಾಗಿದೆ ಎಂದು ನುಡಿದರು.
ಉಪನ್ಯಾಸಕ ಶಶಿಕಾಂತ ಮಡಿವಾಳ ಮತ್ತು ಸಮಾಜ ಸೇವಕ ರವಿ ನಾಯಕ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರು, ಮಹನೀಯರ ಬಗ್ಗೆ ತಿಳಿದುಕೊಳ್ಳಬೇಕು. ಮಹನೀಯರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತವಾದ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಟ್ಯುಟೋರಿಯಲ್ಸ್ನ ಮುಖ್ಯಸ್ಥ ಹಣಮಂತ ಕುಂಬಾರ, ಪ್ರಮುಖರಾದ ಸಂಗೀತಾ ಎಚ್.ಕುಂಬಾರ, ಸಿದ್ದಪ್ಪ, ಭೀಮಣ್ಣ, ಅಂಬಿಕಾ, ತಮನ್ನಾ ಬೇಗಂ, ಪ್ರತೀಕ್ಷಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.