ವಾಡಿ: ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಛೇರಿಯಲ್ಲಿ ಮಲ್ಲಿಕಾರ್ಜುನ ಬಡಾವಣೆಯಲ್ಲಿ ವರ್ಷಗಳ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಬಡ ಮಕ್ಕಳಾದ ಭಾಗ್ಯಶ್ರೀ, ಆಕಾಶ ಅವರಿಗೆ ಧರ್ಮಸ್ಥಳ ವಾತ್ಸಲ್ಯ ಯೋಜನೆಯಡಿ ಪ್ರತಿ ತಿಂಗಳು ಮಂಜೂರಾದ ಮಾಶಾಸನ ಕೈಪಿಡಿ ಮತ್ತು 1,500 ರೂ
ವಾಡಿ ವಲಯದ ಪತಂಜಲಿ ಯೋಗ ಸಮಿತಿ ಪ್ರಭಾರಿ ವೀರಣ್ಣ ಯಾರಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವೆ ಶ್ಲಾಘನೀಯ, ಸರ್ಕಾರ ಮಾಡಲಾರದಂತಹ ಹಲವಾರು ಉತ್ತಮ ಕೆಲಸ ಈ ಸಂಸ್ಥೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ತಂದೆ-ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳ ರೋಧನೆಯ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದ ತಕ್ಷಣ ಸ್ಪಂದಿಸಿ ಅವರ ದಿನನಿತ್ಯದ ವಸ್ತುಗಳ ಜೊತೆಗೆ ಆಹಾರ ಪದಾರ್ಥಗಳನ್ನು ನೀಡಿ ಮಾನಸಿಕ ಸ್ಥೈರ್ಯ ತುಂಬಿದರು.
ಈಗ ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕಿನ ಆಸರೆಗಾಗಿ ಮಶಾಸನ ನೀಡುವುದರ ಮೂಲಕ ಮಾನವೀಯತೆ ಮೆರೆಯುತ್ತಿರುವ ಸಂಸ್ಥೆಗೆ ಧನ್ಯವಾದಗಳು ಎಂದರು.
ಕಳೆದ ಸುಮಾರು ವರ್ಷಗಳ ಕಾಲಾವಧಿಯಲ್ಲಿ ಮಹಿಳೆಯರಲ್ಲಿ ಒಗ್ಗಟ್ಟನ್ನು ಮೂಡಿಸಿ ಸ್ವಸಹಾಯ ಸಂಘಗಳ ಮೂಲಕ ಸಮಾಜದಲ್ಲಿ ತಲೆದೂರಿದ ಅನೇಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ಸೇವೆಗೈಯುತ್ತಿದೆ. ನಮ್ಮ ತಾಲೂಕಿನಲ್ಲಿ ಸುಮಾರು 53 ಜನರಿಗೆ ಪ್ರತಿ ತಿಂಗಳು ಮಾಶಾಸನ ನೀಡುತ್ತಿರುವುದರಿಂದ, ಇವರಿಗಿದ್ದ ಅಶಕ್ತ, ಬಡ ಮತ್ತು ದುರ್ಬಲ ಕುಟುಂಬಗಳ ಬಗ್ಗೆ ಕಾಳಜಿ ತೋರಿಸುತ್ತದೆ ಎಂದು ಹೇಳಿದರು.
ಸಂಸ್ಥೆಯ ಜ್ಞಾನ ವಿಕಾಶ ಸಮನ್ವಯ ಅಧಿಕಾರಿ ಅರ್ಚನಾ ಕುಲಗುಡೆ ಅವರು ಮಾತನಾಡಿ, ನಮ್ಮ ಸಂಸ್ಥೆಯ ಡಾ.ಹೇಮಾವತಿ ಹೆಗ್ಗಡೆ ಮಾತೆಯ ಕನಸಿನ ವಾತ್ಸಲ್ಯ ಯೋಜನೆಯಿಂದ ಅನೇಕ ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದೆವೆ ಎಂದರು.
ವೃದ್ಧ ಕಡುಬಡವ ಕುಟುಂಬಗಳಿಗೆ ಸಹಾಯ ಮಾಡಬೇಕು ಎನ್ನುವ ತಾಯಿ ಹೃದಯದ ಮಾತೃಶ್ರೀಯವರು ನಮ್ಮ ಮೂಲಕ ಸರ್ವೇ ಮಾಡಿಸಿ, ಬಡವರಿಗೆ ದಿನಬಳಕೆಗೆ ಬೇಕಾದ ಪಾತ್ರೆ, ಚಾಪೆ, ದಿಂಬು, ಹೊದಿಕೆ, ಬಟ್ಟೆ, ಸೋಪು, ಹಾಗೂ ಪೌಷ್ಟಿಕ ಆಹಾರ ಇತ್ಯಾದಿ ವಸ್ತುಗಳನ್ನು ವಾತ್ಸಲ್ಯ ಕಿಟ್ ರೂಪದಲ್ಲಿ ವಿತರಣೆ ಮಾಡುವಂತೆ ಮಾಡಿದ್ದಾರೆ. ಆಧುನಿಕ ಸಮಾಜದಲ್ಲಿ ನಿರ್ಗತಿಕರನ್ನು, ರೋಗಿಗಳನ್ನು, ವೃದ್ಧರನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ. ಇಳಿ ವಯಸ್ಸಿನಲ್ಲಿ ಅವರಿಗೆ ಅಭಯ ನೀಡಿ ಪ್ರೀತಿ-ವಿಶ್ವಾಸದಿಂದ ಆರೈಕೆ ಮಾಡಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಪ್ರೇರಣೆ ನೀಡುವುದೆ ಧರ್ಮಸ್ಥಳ ಸಂಸ್ಥೆಯ ಮಹತ್ವಾಕಾಂಕ್ಷೆಯ ವಾತ್ಸಲ್ಯ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ವಾಡಿ ಸಂಸ್ಥೆಯ ಸೇವಾದಾರರಾದ ಮಲ್ಲಮ್ಮ ರೆಡ್ಡಿ, ಸಹಾಯಕಿ ಶರಣಮ್ಮ ಪಾರಾ, ರಾಜು ಒಡೆಯರಾಜ,ಮಲ್ಲಿಕಾರ್ಜುನ ಪುಜಾರಿ ಇದ್ದರು.