ಎಪಿಎಂಸಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಿಲ್ಲಿಸಲು ಕರವೇ ಒತ್ತಾಯ

ಪಟ್ಟಣ

ಚಿತ್ತಾಪುರ: ಎಪಿಎಂಸಿ ವಾಣಿಜ್ಯ ಮಳಿಗೆಗಳನ್ನು ಮೊದಲು ಖಾಲಿ ಮಾಡಿಸಿ ನಂತರ ಹರಾಜು ಪ್ರಕ್ರಿಯೆ ನಡೆಸಿ, ಅಲ್ಲಿವರೆಗೆ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರವೇ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷರು ಮತ್ತು ಸದಸ್ಯರು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.

ಕರವೇ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಮಾತನಾಡಿ, ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಾಣಿಜ್ಯ ಮಳಿಗೆಗಳ ಹಂಚಿಕೆ ಮತ್ತು ಹರಾಜು ಪ್ರಕ್ರಿಯೆ ನಡೆಯುತ್ತಿದೆ, ಅಂಗಡಿ ಸಂಖ್ಯೆ 3,7,8 ಖಾಲಿ ಮಾಡಲಾರದೆ ಹರಾಜು ಪ್ರಕ್ರಿಯೆ ಪ್ರಾರಂಭಿಸಿರುವದು ಖಂಡನೀಯ ಎಂದರು.

ಹರಾಜಿಗೆ ಸಿದ್ದಪಡಿಸಿದ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿದ ಮೇಲೆ ಹರಾಜು ಕೈಗೊಳ್ಳಬೇಕು. ಅಂಗಡಿಗಳ ಮುಂಭಾಗದ ಶೆಡ್’ನಲ್ಲಿ ಯಥಾವತ್ತಾಗಿ ನಡೆಯುತ್ತಿರುವ ಹೋಟೆಲಗಳನ್ನು ಬಂದ್ ಮಾಡಿಸಿ ಹರಾಜು ಪ್ರಕ್ರಿಯೆ ಮುಂದುವರಿಸಬೇಕು ಎಂದರು.

ಹರಾಜು ಪ್ರಕ್ರಿಯೆ ಮುಗಿದ ಮೇಲೆ ಹರಾಜು ಮಾಡಿದ ಬಿಡುದಾರರಿಗೆ ಅಂಗಡಿಯ ಬೀಗ ಕೊಡುವವರಿಗೆ ಯಾವುದೆ ತರಹದ ಅಂಗಡಿಯ ಅಂಗಳದಲ್ಲಿ ಹೋಟೆಲ್ ಅಥವಾ ಇನ್ನಿತರ ಯಾವುದೆ ಪ್ರಕ್ರಿಯೆ ಮಾಡದಂತೆ ತಡೆಹಿಡಿದು ಅಂಗಡಿಯ ಬೀಗ ಕೊಟ್ಟ ನಂತರ ಬಿಡುದಾರರು ತಮ್ಮ ಅಂಗಡಿ ಪ್ರಾರಂಭಿಸಲು ಅರ್ಹರಾಗಿರುತ್ತಾರೆ ಎಂದರು.

ಒಂದು ವೇಳೆ ಈ ಮನವಿ ಪತ್ರವನ್ನು ಕಡೆಗಣಿಸಿ ಅಂಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಿಸದೆ ಹರಾಜು ಪ್ರಕ್ರಿಯೆ ಮುಂದುವರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ತಮ್ಮ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಇರ್ಫಾನ್, ಮಾಜೀದ್, ಅವೇಜ್, ಮುನ್ನಾ, ಲತೀಫ್, ರಾಹುಲ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *