ಸುದ್ದಿ ಸಂಗ್ರಹ ಚಿತ್ತಾಪುರ
ಶಿಕ್ಷಕ ಕೇವಲ ವ್ಯಕ್ತಿಯಲ್ಲ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಚಂದ್ರಕಾಂತ ಕೆಳಮನಿ ಹೇಳಿದರು.
ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಲ್ಲಿ ನಕಾರಾತ್ಮಕ ಭಾವನೆಗಳು ತುಂಬದೆ ನಿಮ್ಮಿoದ ಎಲ್ಲವೂ ಸಾಧ್ಯವೆಂಬ ಸಕಾರಾತ್ಮಕ ಭಾವನೆ ತುಂಬುವ ಕೆಲಸ ಮಾಡಬೇಕು. ಶಿಕ್ಷಕ ವೃತ್ತಿ ಎನ್ನುವುದು ಜಗತ್ತಿನ ಅತ್ಯಂತ ಪವಿತ್ರ ವೃತ್ತಿ ಎಂದು ಕರೆಯಲ್ಪಡುತ್ತದೆ ಎಂದರು.
ಕಾಲಕ್ಕೆ ತಕ್ಕಂತೆ ನಮ್ಮ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಪ್ರಾಮಾಣಿಕವಾಗಿ ಮತ್ತು ಅಷ್ಟೇ ಭದ್ಧತೆಯಿಂದ ಕೆಲಸ ಮಾಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕ. ಇಂದು ಅನೇಕ ಸವಾಲುಗಳ ನಡುವೆ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇಂತಹ ಸಮಯದಲ್ಲಿ ಶಿಕ್ಷಕರು ತಮ್ಮ ಭೋಧನಾ ವೃತ್ತಿಯ ಜೊತೆಗೆ ಮತ್ತು ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಬೇಕು. ತಮ್ಮ ವ್ಯಕ್ತಿತ್ವ ಚೆನ್ನಾಗಿ ರೂಪಿಸಿಕೊಳ್ಳುತ್ತ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಇಂತಹ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಕಾರ್ಯಕ್ರಮದ ಸಾನಿದ್ಯವನ್ನು ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರ ಜಿ ಬಾಳಿ, ಸದಸ್ಯರಾದ ಸಿದ್ದಲಿಂಗ ಜ್ಯೋತಿ, ಜಾಕೀರ್ ಹುಸೇನ್ ಮತ್ತು ಫತ್ತೆಖಾನ್ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಶಿಕ್ಷಕ ಬಳಗ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಭಾಗ್ಯಶ್ರೀ ಪ್ರಾರ್ಥಿಸಿದರು, ಮೇಘನಾ ನಿರೂಪಿಸಿದಳು ಮತ್ತು ರಶ್ಮಿಕಾ ವಂದಿಸಿದರು.