ಚಿತ್ತಾಪುರ: ದೇಶ ಸುತ್ತು-ಕೋಶ ಓದು ಎಂಬ ಮಾತಿನಂತೆ, ಇತಿಹಾಸ, ಸಂಸ್ಕೃತಿ, ಕಲೆ, ಪರಂಪರೆ ಅರಿಯಲು ಅಧ್ಯಯನ ಮಾಡುವದರ ಜೊತೆಗೆ ಐತಿಹಾಸಿಕ, ಸುಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡುವುದರಿಂದ ಆಧ್ಯಾತ್ಮಿಕ ಜ್ಞಾನ ಮತ್ತು ಮನಸಿಗೆ ನೆಮ್ಮದಿ ದೊರೆಯಲು ಸಾಧ್ಯ ಎಂದು ಸಮಾಜ ಸೇವಕರಾದ ನರಸಪ್ಪ ಬಿರಾದಾರ ದೇಗಾಂವ ಮತ್ತು ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ತಾಲೂಕಿನ ಸುಕ್ಷೇತ್ರ ನಾಲವಾರನ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿಗೆ ಕೋರಿಸಿದ್ದೇಶ್ವರ ಮಠದ ಕೊಡುಗೆ ಅಪಾರವಾಗಿದೆ. ಇಲ್ಲಿ ಅನ್ನದಾಸೋಹ, ಜ್ಞಾನ ದಾಸೋಹವಿದೆ. ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಅನಕೂಲವಾಗಲಿ ಎಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಸುತ್ತ-ಮುತ್ತಲಿನ ಅನೇಕ ಸ್ಥಳಗಳ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಶ್ರೀ ಕೋರಿಸಿದ್ದೇಶ್ವರರು ಪವಾಡ ಪುರಷರಾಗಿದ್ದರು. ಅನೇಕ ಭಕ್ತರನ್ನು ಉದ್ಧರಿಸಿದ್ದಾರೆ. ಪ್ರಸ್ತುತ ಪೀಠಾಧಿಪತಿ ಪೂಜ್ಯರು ಸಮಾಜಪರ ಕಾಳಜಿಯುಳ್ಳವರಾಗಿದ್ದಾರೆ. ಅದಕ್ಕಾಗಿಯೇ ಇಂದು ಮಠಕ್ಕೆ ಸರ್ವ ಸಮೂಹದವರು ಭೇಟಿ ನೀಡಿ, ದರ್ಶನ ಪಡೆದು ಪುನಿತರಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸದಸ್ಯರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ಸುಜಯ್ ಎಸ್.ವಂಟಿ, ಅಭಿಷೇಕ ಶಾರ್ವರಿ ಸೇರಿದಂತೆ ಅನೇಕರು ಇದ್ದರು.