ಕಾಳಗಿ: ವಿದ್ಯಾರ್ಥಿಗಳು ತಮ್ಮ ಮಕ್ಕಳಂತೆ ಕಾಳಜಿ ವಹಿಸಿ, ಅವರಿಗೆ ಜ್ಞಾನ, ಬುದ್ಧಿ, ಕೌಶಲಗಳನ್ನು ನೀಡಿ, ದೇಶದ ಅಮೂಲ್ಯ ಸಂಪತ್ತನ್ನಾಗಿಸುವ ವಿದ್ಯಾರ್ಥಿ ಸ್ನೇಹಿ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು ಎಂದು ಮುಖ್ಯ ಶಿಕ್ಷಕ ಹಾಗೂ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು.
ತಾಲೂಕಿನ ಕೋರವಾರ ಅಣವೀರಭದ್ರೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಕಾಳಗಿ ಕನ್ನಡ ಸಾಹಿತ್ಯ ಪರಿಷತ್’ನ ತಾಲೂಕಾ ಘಟಕ ಇವುಗಳು ಜಂಟಿಯಾಗಿ ಶುಕ್ರವಾರ ಏರ್ಪಡಿಸಿದ್ದ ‘63ನೇ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ : ಶಿಕ್ಷಕರಿಗೆ ಗೌರವ ಸತ್ಕಾರ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುರು-ಹಿರಿಯರು, ಶಿಕ್ಷಕರು ಮತ್ತು ತಂದೆ-ತಾಯಿಯ ಮಾತನ್ನು ಆಲಿಸಿ ಮುನ್ನೆಡೆಯಬೇಕು. ವಿದ್ಯಾರ್ಥಿಗಳ ಭವ್ಯ ಭವಿಷ್ಯ ನಿರ್ಮಿಸಲು ಶಿಕ್ಷಕರು ಕರ್ತವ್ಯ ಬದ್ಧತೆಯಿಂದ ಸೇವೆ ಸಲ್ಲಿಸಿ, ವೃತ್ತಿ ಘನತೆಯನ್ನು ಕಾಪಾಡಿಕೊಂಡು ಹೋಗುವ ಗುರುತರ ಜವಾಬ್ದಾರಿಯಿದೆ ಎಂದರು.
ಕಸಾಪ ಕಾಳಗಿ ತಾಲೂಕಾ ಅಧ್ಯಕ್ಷ ಸಂತೋಷ ಕುಡಳ್ಳಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು. ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಶಿಲ್ಪಿಗಳು ಶಿಕ್ಷಕರಾಗಿದ್ದಾರೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಕೊಡುಗೆ ಅಪಾರವಾಗಿದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿದರು.
ಶಿಕ್ಷಕರಾದ ನಾಗೇಂದ್ರ ಆರ್.ಮೋಘಾ, ಚನ್ನವೀರ ಕಪನೂರ, ಮಲ್ಲಿಕಾರ್ಜುನ ಹೆಳವರ, ಬಾಬುರಾವ ಪೂಜಾರಿ, ಬಾಬುರಾವ ಬೀದರ, ಸವಿತಾ ಜೇವರ್ಗಿ, ಭಾಗ್ಯಶ್ರೀ ಬೀದರ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಠಲ ಎಸ್.ಪೂಜಾರಿ, ರಾಹುಲ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.