ಇಂದೋರ್: ಇಂದೋರ್ನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆಯೊಂದರಲ್ಲಿ, ನವಜಾತ ಶಿಶುಗಳ ತೀವ್ರ ನಿಗಾ ಘಟಕದ ಒಳಗಿದ್ದ ಎರಡು ನವಜಾತ ಶಿಶುಗಳನ್ನು ಇಲಿಗಳು ಕಚ್ಚಿವೆ. ವಾರಾಂತ್ಯದಲ್ಲಿ ಇಲಿಗಳು ಕಚ್ಚಿದ್ದು, ಒಂದು ಶಿಶು ಮಂಗಳವಾರ ಸಾವಿಗೀಡಾಗಿದೆ. ಆದಾಗ್ಯೂ, ಆಸ್ಪತ್ರೆ ಅಧಿಕಾರಿಗಳು ಸಾವಿಗೆ ಕಾರಣ ಇಲಿ ಕಡಿತವಲ್ಲ, ಆಕೆಯ ಗಂಭೀರ ವೈದ್ಯಕೀಯ ಸ್ಥಿತಿ ಎಂದು ಹೇಳಿದ್ದಾರೆ.
ಮಹಾರಾಜ ಯಶವಂತರಾವ್ ಆಸ್ಪತ್ರೆಯ NICU ಒಳಗೆ ರವಿವಾರ ಮತ್ತು ಸೋಮವಾರ ಸತತವಾಗಿ ಇಲಿಗಳು ಕಚ್ಚಿರುವ ಘಟನೆ ನಡೆದಿವೆ. ಹುಟ್ಟಿ ಮೂರ್ನಾಲ್ಕು ದಿನಗಳಷ್ಟೇ ಕಳೆದಿದ್ದ ಎರಡೂ ನವಜಾತ ಶಿಶುಗಳ ಬೆರಳುಗಳು, ತಲೆ ಮತ್ತು ಭುಜಗಳಿಗೆ ಗಾಯಗಳಾಗಿವೆ ಎಂದು ಆಸ್ಪತ್ರೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಇಲಾಖೆಯು ಎಂವೈ ಆಸ್ಪತ್ರೆ ಸಂಯೋಜಿತವಾಗಿರುವ ಎಂಜಿಎಂ ವೈದ್ಯಕೀಯ ಕಾಲೇಜಿನ ಡೀನ್ಗೆ ಶೋ-ಕಾಸ್ ನೋಟಿಸ್ ನೀಡಿದೆ. ಆಸ್ಪತ್ರೆ ಆಡಳಿತವು ಹಲವಾರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಇಬ್ಬರು ನರ್ಸ್ಗಳನ್ನು ಅಮಾನತುಗೊಳಿಸಲಾಗಿದ್ದು, ಮುಖ್ಯ ನರ್ಸ್, ಪಿಐಸಿಯು ಉಸ್ತುವಾರಿ ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಿಗೆ ಶೋ-ಕಾಸ್ ನೋಟಿಸ್ ನೀಡಲಾಗಿದೆ. ಹೆಚ್ಚುವರಿಯಾಗಿ, ನರ್ಸಿಂಗ್ ಸೂಪರಿಂಟೆಂಡೆಂಟ್ ಸ್ಥಾನದಿಂದ ವಜಾ ಮಾಡಲಾಗಿದೆ.
ಮೃತಪಟ್ಟ ಹೆಣ್ಣು ಮಗು ಹುಟ್ಟಿದಾಗ ಕೇವಲ 1.2 ಕೆಜಿ ತೂಕವಿತ್ತು ಮತ್ತು ವೈದ್ಯರ ಪ್ರಕಾರ, ಬಹು ಜನ್ಮಜಾತ ಸಮಸ್ಯೆಗಳು, ಕಡಿಮೆ ಹಿಮೋಗ್ಲೋಬಿನ್ ಮಟ್ಟಗಳು ಮತ್ತು ಅಭಿವೃದ್ಧಿಯಾಗದ ಅಂಗಾಂಗಗಳಿಂದ ಬಳಲುತ್ತಿದ್ದ ಮಗು. ಆಕೆ ಸೆಪ್ಟಿಸೆಮಿಯಾಗೆ ಚಿಕಿತ್ಸೆ ಪಡೆಯುತ್ತಿದ್ದಳು.
TOI ಜೊತೆ ಮಾತನಾಡಿದ MGM ವೈದ್ಯಕೀಯ ಕಾಲೇಜಿನ ಡೀನ್ ಡಾ.ಅರವಿಂದ್ ಘಂಘೋರಿಯಾ, ಮಂಗಳವಾರ ಶವಪರೀಕ್ಷೆ ನಡೆಸಲಾಗಿದೆ, ವರದಿಯು ಸಾವಿಗೆ ಕಾರಣ ಏನೆಂಬುದನ್ನು ತಿಳಿಸುತ್ತದೆ ಎಂದರು.
ಇದಲ್ಲದೆ, ಕೀಟ ನಿಯಂತ್ರಣ ಸಂಸ್ಥೆ ಅಗೈಲ್ ಕಂಪನಿಗೆ 1 ಲಕ್ಷ ರೂ ದಂಡ ವಿಧಿಸಲಾಗಿದೆ ಮತ್ತು ಆಸ್ಪತ್ರೆಯೊಂದಿಗಿರುವ ಒಪ್ಪಂದವನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ. MYH ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ಅವರಿಗೆ ಆಸ್ಪತ್ರೆಯಾದ್ಯಂತ ತಕ್ಷಣ ಮತ್ತು ಸಂಪೂರ್ಣ ಕೀಟ ನಿಯಂತ್ರಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಮಧ್ಯಪ್ರದೇಶ ಮಾನವ ಹಕ್ಕುಗಳ ಆಯೋಗ ಕೂಡ ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಹಂಗಾಮಿ ಅಧ್ಯಕ್ಷ ರಾಜೀವಕುಮಾರ್ ಟಂಡನ್ ಅವರು ಆಸ್ಪತ್ರೆ ತೆಗೆದುಕೊಂಡ ಕ್ರಮಗಳ ಕುರಿತು ಒಂದು ತಿಂಗಳೊಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಆಯೋಗವು ಈ ಘಟನೆಯನ್ನು ‘ಪ್ರಾಥಮಿಕ ಮಾನವ ಹಕ್ಕುಗಳ ಉಲ್ಲಂಘನೆ’ ಎಂದು ಕರೆದಿದೆ. MY ಆಸ್ಪತ್ರೆಯಲ್ಲಿನ ಸುರಕ್ಷತೆ ಮತ್ತು ನೈರ್ಮಲ್ಯ ಪ್ರೋಟೋಕಾಲ್ಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದರು.