ಭೊಪಾಲ್: ಶಿಕ್ಷಕಿ ಪ್ರೀತಿ ಒಪ್ಪಿಕೊಳ್ಳದಿದ್ದಕ್ಕೆ, ವಿದ್ಯಾರ್ಥಿಯೊಬ್ಬ ಟೀಚರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದಿದೆ.
ಘಟನೆಯಲ್ಲಿ ಶಿಕ್ಷಕಿಯ ದೇಹ ಶೇ.30ರಷ್ಟು ಸುಟ್ಟು ಹೋಗಿದೆ, ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಹೆಸರು ಸೂರ್ಯಾಂಶ್ ಕೊಚಾರ್, ಆತ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು. ಆ.15 ರಂದು ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಪೆಟ್ರೋಲ್ ಬಾಟಲಿಯೊಂದಿಗೆ ಶಿಕ್ಷಕಿಯ ಮನೆಗೆ ತೆರಳಿ, 26 ವರ್ಷದ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದನು.
ಪ್ರಾಥಮಿಕ ತನಿಖೆಯಲ್ಲಿ ಸೂರ್ಯಾಂಶ್ ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ ಆದರೆ ಅದು ಒನ್ ಸೈಡೆಡ್ ಪ್ರೀತಿಯಾಗಿತ್ತು. ಆಗಸ್ಟ್ 15ರ ಕಾರ್ಯಕ್ರಮಕ್ಕೆ ಶಿಕ್ಷಕಿ ಸೀರೆ ಧರಿಸಿ ಬಂದಾಗ, ಆರೋಪಿ ವಿದ್ಯಾರ್ಥಿ ಏನೇನೋ ಮನಬಂದಂತೆ ಕಮೆಂಟ್ ಮಾಡಿದ್ದ, ಇದರಿಂದ ಕೋಪಗೊಂಡ ಶಿಕ್ಷಕಿ ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದರು.
ಬಳಿಕ ಸೂರ್ಯಾಂಶ್ಗೆ ಮುಖ್ಯೋಪಾಧ್ಯಾಯರು ಕರೆ ಮಾಡಿ ಬೈದಿದ್ದರು, ಇದರಿಂದ ಆತ ಕೋಪಗೊಂಡು ಶಿಕ್ಷಕಿಗೆ ತೊಂದರೆ ಕೊಡಬೇಕೆಂದು ಆತ ಅಲ್ಲಿಗೆ ತೆರಳಿದ್ದ. ಶಿಕ್ಷಕಿಯನ್ನು ಮೂರು ತಿಂಗಳ ಹಿಂದಷ್ಟೇ ಅತಿಥಿ ಶಿಕ್ಷಕಿಯನ್ನಾಗಿ ನೇಮಿಸಲಾಗಿತ್ತು. ಕೊತ್ವಾಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಡೊಂಗರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣಪುರ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದರು.
ಪ್ರಸ್ತುತ ಆತ ಪೊಲೀಸ್ ಬಂಧನದಲ್ಲಿದ್ದು, ವಿವರವಾದ ತನಿಖೆ ನಡೆಯುತ್ತಿದೆ.