ಕಲಬುರಗಿ: ಕಣ್ಣುಗಳು ದಾನ ಮಾಡುವುದು ಒಂದು ಶ್ರೇಷ್ಠ ಕಾರ್ಯ. ಹುಟ್ಟು ಕುರುಡರಾಗಿ ಅಥವಾ ಅಪಘಾತದಿಂದ ದೃಷ್ಟಿ ಕಳೆದುಕೊಂಡವರಿಗೆ ಕಣ್ಣು ದಾನ ಮಾಡುವ ಮೂಲಕ ಅವರಿಗೆ ದೃಷ್ಟಿ ಭಾಗ್ಯ ನೀಡಬಹುದು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದ ಶಹಾಬಜಾರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ “41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ” ಕಾರ್ಯಕ್ರಮವನ್ನು ಮಹಿಳೆಯೊಬ್ಬರ ಕಣ್ಣು ಪರೀಕ್ಷಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾವಿನ ನಂತರವು ನೇತ್ರದಾನದಿಂದ ಜಗತ್ತನ್ನು ನೋಡಬಹುದು.ಯಾವುದೇ ಜಾತಿ, ಧರ್ಮ, ವಯಸ್ಸು, ಲಿಂಗ, ರಕ್ತದ ಗುಂಪು, ಅಥವಾ ಕಣ್ಣಿನ ಸಮಸ್ಯೆಗಳ ಅಡೆತಡೆಗಳಿಲ್ಲದೆ ಯಾರಾದರೂ ನೇತ್ರದಾನ ಮಾಡಬಹುದು ಎಂದರು.
ನೇತ್ರದಾನದಿಂದ ಅಂಧತ್ವ ನಿವಾರಣೆ, ಸಾರ್ಥಕ ಸಾವು, ಶಾಶ್ವತ ಬದುಕು ಸಾಧ್ಯವಿದೆ. ಆದ್ದರಿಂದ ಮರಣಾನಂತರ ನೇತ್ರದಾನ ಮಾಡಬೇಕು. ಇದರ ಬಗ್ಗೆ ವ್ಯಾಪಕ ಜಾಗೃತಿ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್, ಪ್ರಮುಖರಾದ ಗಂಗಾಜ್ಯೋತಿ ಗಂಜಿ, ರೇಶ್ಮಾ ನಕ್ಕುಂದಿ, ಮಂಗಳಾ ಚಂದಾಪುರ, ಜಗನಾಥ ಗುತ್ತೇದಾರ, ನಾಗೇಶ್ವರಿ ಮುಗಳಿವಾಡಿ, ಚಂದಮ್ಮ ಮರಾಠಾ, ನಾಗಮ್ಮ ಚಿಂಚೋಳಿ, ಚಂದ್ರಕಲಾ ಬಿರಾದಾರ ಸೇರಿದಂತೆ ಅನೇಕರು ಇದ್ದರು.