ಸದೃಢ ಆರೋಗ್ಯಕ್ಕಾಗಿ ಸಮತೋಲಿತ ಆಹಾರದ ಸೇವನೆ ಅಗತ್ಯ: ಡಾ.ಅನುಪಮಾ

ನಗರದ

ಕಲಬುರಗಿ: ಸದೃಢ ಆರೋಗ್ಯಕ್ಕಾಗಿ ಎಲ್ಲರು ಸಮತೋಲಿತ ಆಹಾರ ಸೇವಿಸುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.

ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಪೋಷಕಾಂಶ ಸಪ್ತಾಹ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದ ಅವರು, ಯಾವುದೆ ರಾಷ್ಟ್ರದ ಅಭಿವೃದ್ದಿಯಲ್ಲಿ ಆರೋಗ್ಯ ಭರಿತ, ಸದೃಢ ಮಾನವ ಸಂಪನ್ಮೂಲ ತುಂಬಾ ಅವಶ್ಯಕ. ಮಗುವಿದ್ದಾಗಲೇ ಅದಕ್ಕೆ ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರ ನೀಡಬೇಕು. ಇದರಿಂದ ಆ ಮಗು ಮುಂದೆ ದೈಹಿಕವಾಗಿ, ಮಾನಸಿಕವಾಗಿ, ಸಧೃಢವಾಗಿ ಬೆಳೆಯಲು ಸಾಧ್ಯವಿದೆ ಎಂದರು.

ಹದಿಹರೆಯದವರು ಮತ್ತು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರ ಹಾಗೂ ಜನಿಸುವ ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅದಕ್ಕಾಗಿ ಸರ್ಕಾರ ಸಾಕಷ್ಟು ಹಣ ವೆಚ್ಚ ಮಾಡಿ ಪೋಷಣಾ ಯೋಜನೆಯನ್ನು ಒಂದು ಅಭಿಯಾನದ ರೂಪದಲ್ಲಿ ಯುವತಿಯರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಪೋಷಕಾಂಶಗಳ ಆಹಾರ ನೀಡಿ ಅನೀಮಿಯಾ ಮುಕ್ತ ಭಾರತ ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಸಹಕಾರ ಅಗತ್ಯವಾಗಿದೆ ಎಂದರು.

ಅಪೌಷ್ಟಿಕತೆಯೆಂಬುದು ಒಂದು ವರ್ತುಲವಾಗಿದೆ. 2.5 ಕೆ.ಜಿ ಗಿಂತ ಕಡಿಮೆ ತೂಕದ ಮಗು ಜನಿಸಿದರೆ, ಮುಂದೆ ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರೌಢಾವಸ್ಥೆ ಹಂತ ತಲುಪಿದ ನಂತರವು ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿ ದೊರೆಯುತ್ತಾರೆ. ಅಂತಹ ತಾಯಿಗೆ ಜನಿಸಿದ ಮಗುವು ಸಹಜವಾಗಿ ಅಪೌಷ್ಟಿಕತೆಯ ಎದುರಿಸುತ್ತದೆ. ಅನೇಕ ಮಕ್ಕಳು ಕ್ಷೀಣವಾಗಿ ಹಾಗೂ ಅತಿ ಕಡಿಮೆ ತೂಕ ಹೊಂದಿರುವುದಕ್ಕೆ ತಾಯಿಯು ಎದುರಿಸುತ್ತಿರುವ ಅಪೌಷ್ಠಿಕತೆ ಕಾರಣವಾಗಿದೆ. ಆದ್ದರಿಂದ ತಾಯಿಯು ಹಸಿರು ಸೊಪ್ಪು, ತರಕಾರಿಗಳು, ಹಣ್ಣು-ಹಂಪಲುಗಳು, ಮೊಳಕೆ ಕಾಳುಗಳು, ದ್ವಿದಳ ಧಾನ್ಯಗಳು, ಸಮತೋಲಿತ ಆಹಾರ ನಿಯಮಿತವಾಗಿ ಸೇವಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್, ಪ್ರಮುಖರಾದ ಗಂಗಾಜ್ಯೋತಿ ಗಂಜಿ, ರೇಶ್ಮಾ ನಕ್ಕುಂದಿ, ಮಂಗಳಾ ಚಂದಾಪುರ, ಜಗನಾಥ ಗುತ್ತೇದಾರ, ನಾಗೇಶ್ವರಿ ಮುಗಳಿವಾಡಿ, ಚಂದಮ್ಮ ಮರಾಠಾ, ನಾಗಮ್ಮ ಚಿಂಚೋಳಿ, ಚಂದ್ರಕಲಾ ಬಿರಾದಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *