ಕಲಬುರಗಿ: ಕುಂತಲ ನಾಡಿನ ಪ್ರಮುಖ ಧಾರ್ಮಿಕ, ಆಧ್ಯಾತ್ಮಿಕ, ವಾಣಿಜ್ಯ ಕೇಂದ್ರವಾಗಿ ಕಡಗಂಚಿ ಗ್ರಾಮವು ಇತಿಹಾಸದಲ್ಲಿ ರಾರಾಜಿಸಿದೆ. ಇಲ್ಲಿನ ಶಾಸನ-ಸ್ಮಾರಕಗಳು ನಾಡಿನ ಇತಿಹಾಸವನ್ನು ಸಾರುತ್ತವೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ಆಳಂದ ತಾಲೂಕಿನ ಕಡಗಂಚಿಯ ಬಕ್ಕೇಶ್ವರ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-37ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಡಗಂಚಿಯ ಕ್ರಿ.ಶ 1118ರ ಮತ್ತು 12ನೇ ಶತಮಾನದ ಶಾಸನಗಳ ಪ್ರಕಾರ, ಮಲ್ಲಿಕಾರ್ಜುನ ದೇವಾಲಯಕ್ಕೆ ಕಲ್ಯಾಣ ಚಾಲುಕ್ಯರ ಮಾಂಡಳಿಕ ಅರಸರು ಅನೇಕ ಜಮೀನುಗಳನ್ನು ದತ್ತಿಯಾಗಿ ನೀಡಿದ ಉಲ್ಲೇಖವಿದೆ. ಆಳಂದ ಸಾಸಿರ ನಾಡಿಗೆ ಸೇರಿರುವ ಈ ಭಾಗವನ್ನು ಆರನೇ ವಿಕ್ರಮಾಧಿತ್ಯನ ರಾಣಿ ಚಂದಲಾದೇವಿ ಕಡಗಂಚಿ ಆಳ್ವಿಕೆ ಮಾಡಿದ್ದಾಳೆ. ಇಲ್ಲಿಯ ಸುತ್ತ-ಮುತ್ತಲಿನ ಗ್ರಾಮಗಳಾದ ನಿಂಬರ್ಗಾ, ಲಾಡ್ ಚಿಂಚೋಳಿ, ಬೋಧನ, ನರೋಣಾ, ಪಡಸಾವಳಗಿ, ಮಾಡ್ಯಾಳ್, ಹೊಡಲ್ ಸೇರಿದಂತೆ ಮುಂತಾದ ಗ್ರಾಮಗಳು ಪ್ರಾಚೀನ ಕಾಲದ ಕಲೆ, ಸಾಹಿತ್ಯ, ಸಂಗೀತ, ಚರಿತ್ರೆಯನ್ನು ತಿಳಿಸಿಕೊಡುತ್ತವೆ. ಪ್ರಭು ಕೇಶಿಮ್ ಅರಸ, ಮಲ್ಲರಸ ಇವರು ಚಿಂಚನಸೂರ ಗ್ರಾಮದ ಜಮೀನುಗಳನ್ನು ಗ್ರಾಮದ ಮಲ್ಲಿಕಾರ್ಜುನ ದೇವಾಲಯಕ್ಕೆ ಉಂಬಳಿಯಾಗಿ ನೀಡಿರುವುದು ಇತಿಹಾಸದಿಂದ ತಿಳಿಯುತ್ತದೆ. ಶಾಂತೇಶ್ವರ, ಮಲ್ಲಿಕಾರ್ಜುನ, ಬಕ್ಕೇಶ್ವರ, ಹನುಮಾನ ದೇವಾಲಯ ಮತ್ತು ಅಗಸಿ ಬಾಗಿಲಿನಲ್ಲಿ, ಹಳೆಯ ಪುಷ್ಕರಣಿ ಸೇರಿದಂತೆ ಅನೇಕ ಸ್ಮಾರಕಗಳಿವೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಮಾರಕಗಳ ರಕ್ಷಣೆಗೆ ಪ್ರತಿಯೊಬ್ಬರು ಪ್ರಯತ್ನಿಸಬೇಕು. ನಮ್ಮೂರಿನ ಇತಿಹಾಸದ ಬಗ್ಗೆ ಹೆಮ್ಮೆ ಪಡೆಬೇಕು. ಎಲ್ಲೆಡೆ ಜಾಗೃತಿ ಮೂಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಯ್ಯಸ್ವಾಮಿ, ಕಾಶಿನಾಥ ಚೇಂಗಣಿ, ಪದ್ಮಣ್ಣ, ಅಜ್ಜುಸಾಬ್, ಕಲ್ಯಾಣಿ, ಪ್ರಕಾಶ್, ಶರಣಪ್ಪ, ವಿಶ್ವನಾಥ, ವಿನಾಯಕ, ಶಾಂತಪ್ಪ, ಸಿದ್ದಾರೂಡ, ಮಲ್ಲಿಕಾರ್ಜುನ, ಶಾಂತಪ್ಪ, ಮೆಹಬೂಬ್ ಸಾಬ್, ಈರಪ್ಪ, ರಾಜಕುಮಾರ, ಸಿದ್ದಲಿಂಗ, ದೇವೇಂದ್ರಪ್ಪ, ಜೈನೋದ್ದೀನ್, ಸಂತೋಷ್, ವಿಶ್ವನಾಥಸ್ವಾಮಿ, ಶಾಂತಯ್ಯಪ್ಪ, ಸಂತೋಷ, ಸಿದ್ರಾಮಪ್ಪ, ಗುರುಶಾಂತಪ್ಪ, ಶಿವರಾಜ ಇಟಕಾರ್, ಈರಣ್ಣ ಪೂಜಾರಿ, ನಾಗೇಶ್ ಕಣ್ಣಿ, ಶಾಂತಪ್ಪ ಪೂಜಾರಿ, ಶಾಮರಾವ ಇಟಕಾರ್, ಮಲ್ಲಿಕಾರ್ಜುನ ಇಟಕಾರ್, ಪ್ರಶಾಂತ, ಕಾರ್ತಿಕ ಧನ್ನಿ, ಶ್ರೀಶೈಲ್ ಧನ್ನಿ ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.