ಹಾವೇರಿ: ಪತಿ ಕುಟುಂಬ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು, ಮಹಿಳೆ ತನ್ನ ಮಗಳ ಜೊತೆ ವರಾದ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ತಾಲೂಕಿನ ವರದಾಹಳ್ಳಿ ಗ್ರಾಮದ ಬಳಿ ನಡೆದಿದೆ.
ಸವಿತಾ ನಾಗರಾಜ್ ಉಳ್ಳಾಗಡ್ಡಿ (38) ಹಾಗೂ ಕಾವ್ಯಾ (12) ಆತ್ಮಹತ್ಯೆಗೆ ಶರಣಾದ ತಾಯಿ, ಮಗಳು. ಗಂಡನ ಮನೆಯಲ್ಲಿ ದಿನನಿತ್ಯ ಭಿನ್ನಾಭಿಪ್ರಾಯ ಹಾಗೂ ಕಲಹಗಳು ನಡೆಯುತ್ತಿದ್ದವು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ರವಿವಾರ (ಅ.19) ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿ ಮೂಲಕ ನದಿಯಲ್ಲಿ ಹುಡುಕಾಟ ನಡೆಸಿ, ಬಾಲಕಿ ಮೃತದೇಹ ಪತ್ತೆ ಮಾಡಿದ್ದಾರೆ. ಸವಿತಾ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಸವಿತಾ ಮದುವೆಯಾದಾಗಿನಿಂದ ಗಂಡ ನಾಗರಾಜ ಹಾಗೂ ಮಾವ, ಅತ್ತೆ ಇಬ್ಬರು ನಾದಿನಿಯರು ಕಾಟ ಕೊಡುತ್ತಲೆ ಇದ್ದರು. ನಿಮ್ಮ ಅಪ್ಪನ ಮನೆಯಿಂದ ಆಸ್ತಿ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದರು.ಈ ಬಗ್ಗೆ ಹಲವು ಸಲ ರಾಜಿ ಪಂಚಾಯತಿ ಮಾಡಿದ್ದೆವು. ಆದರೆ ಕಳೆದ ಒಂದು ವಾರದಿಂದ ಗಂಡನ ಮನೆಯವರ ಕಿರುಕುಳ ಹೆಚ್ಚಾಗಿತ್ತು. ಇದರಿಂದ ಬೇಸತ್ತು ಸವಿತಾ ಮಗಳ ಜೊತೆ ನದಿಗೆ ಹಾರಿದ್ದಾಳೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಈ ಆರೋಪವನ್ನು ಗಂಡನ ಮನೆಯವರು ಅಲ್ಲಗಳೆದಿದ್ದಾರೆ. ನಾವು ಯಾವ ಕಿರುಕುಳ ಕೊಟ್ಟಿಲ್ಲ. 7 ಎಕರೆ ಜಮೀನಿದೆ. ನಿಮ್ಮ ಜಮೀನಿನಲ್ಲಿ ನೀವು ದುಡಿದುಕೊಂಡು ತಿನ್ನಿ ಎಂದು ಹೇಳಿದ್ದೆವು. ನಾವು ಯಾವ ತೊಂದರೆ ಮಾಡಿಲ್ಲ ಎಂದು ಮೃತ ಸವಿತಾ ಅತ್ತೆ ಶಾಂತವ್ವ ಹೇಳಿದ್ದಾರೆ.
ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.