ಕಾಳಗಿ: ಕನ್ನಡಿಗರ ಸಾಧನೆಗಳನ್ನು ಸಾದರಪಡಿಸುವ ಮಂಗಲಗಿಯ ಸ್ಮಾರಕಗಳು ನಾಡಿನ ಇತಿಹಾಸ ಕಟ್ಟಿಕೊಡುವಲ್ಲಿ ಸಹಕಾರಿಯಾಗಿದೆ. 11ನೇ ಶತಮಾನದಲ್ಲಿ ವಿವಿಧ ಧರ್ಮಿಯರು ಬಾಳಿ ಬೆಳಗಿದ ಸಾಮರಸ್ಯದ ನೆಲವೀಡು ಇದಾಗಿದೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಮಂಗಲಗಿ ಗ್ರಾಮದ ಐತಿಹಾಸಿಕ ಕ್ಷೇತ್ರ ಮಲ್ಲಿಕಾರ್ಜುನ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಕಲಬುರಗಿಯ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-31ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಂಗಲಗಿ ಗ್ರಾಮವು ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರ ಕಾಲದಲ್ಲಿ ಶಿಕ್ಷಣದ ಅಗ್ರಹಾರವಾಗಿ, ವಾಣಿಜ್ಯ ಕೇಂದ್ರವಾಗಿ ಪ್ರಮುಖ ಪಾತ್ರವಹಿಸಿದೆ. ದೇವಾಲಯವು ತುಂಬಾ ಕಲಾತ್ಮಕವಾಗಿದೆ. ಸ್ತಂಭಗಳು, ನಟರಾಜನ ಶಿಲ್ಪಗಳು, ಗ್ರಾಮದಲ್ಲಿರುವ ಎತ್ತರವಾದ ಜೈನ ಪಾರ್ಶ್ವನಾಥ ವಿಗ್ರಹವು ಗಮನ ಸೆಳೆಯುತ್ತವೆ. ಇಲ್ಲಿನ ವೀರಗಲ್ಲುಗಳು ಶೌರ್ಯದ ಸಂಕೇತವಾಗಿವೆ. ಕನ್ನಡಿಗರ ರಕ್ಷಣೆಗಾಗಿ ತ್ಯಾಗ ಬಲಿದಾನಗೈದ ವೀರಯೋಧರ ಯಶೋಗಾಥೆ ತಿಳಿಸುತ್ತವೆ. ಕಲ್ಯಾಣ ಚಾಲುಕ್ಯರ ಮೂರನೇ ಸೋಮೇಶ್ವರನ ರಾಣಿ ಯಕ್ಕಲದೇವಿ, ಆರನೇಯ ವಿಕ್ರಮಾದಿತ್ಯನ ರಾಣಿ ಚಂದಲಾದೇವಿ ಮತ್ತು ಮೈಲಳಾದೇವಿಯರು ಈ ಗ್ರಾಮವನ್ನು ಆಳಿಕೆ ಮಾಡಿದ್ದಾರೆ ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ ಎಂದರು.
ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ಕಳೆದ ಒಂದುವರೆ ವರ್ಷದಿಂದ ಕಲಬುರಗಿ ಜಿಲ್ಲೆಯ ಜನತೆಗೆ ಈ ನೆಲದ ಇತಿಹಾಸ ತಿಳಿಸಿಕೊಡುವ ಮೂಲಕ ನಮ್ಮ ಬಳಗದ ವತಿಯಿಂದ ಪ್ರಾಮಾಣಿಕ ಕೆಲಸ ನಡೆದಿದೆ. ಪ್ರತಿಯೊಬ್ಬರಲ್ಲಿ ಐತಿಹಾಸಿಕ ಪ್ರಜ್ಞೆ ಜಾಗೃತವಾಗಬೇಕು ಎಂದರು.
ಮಂಗಲಗಿಯಲ್ಲಿ ದೊರೆಯುವ ಐತಿಹಾಸಿಕ ಸ್ಮಾರಕಗಳಿಂದ ನಾಡಿನ ಇತಿಹಾಸ ಕಟ್ಟಿಕೊಡಲು ಸಾಧ್ಯವಾಗಿದೆ. ಕಲ್ಯಾಣ ಚಾಲುಕ್ಯರ, ರಾಷ್ಟ್ರಕೂಟರ ಶೈಲಿಯ ದೇವಾಲಯಗಳು, ಶಿಲ್ಪಗಳು ಗಮನಸೆಳೆಯುತ್ತದೆ. ಗ್ರಾಮದ ಮಲ್ಲಿಕಾರ್ಜುನ ದೇವಾಲಯುವ ಚಾಲುಕ್ಯ ಮತ್ತು ರಾಷ್ಟ್ರಕೂಟರ ಸಮಿಶ್ರ ಶೈಲಿಯಿಂದ ನಿರ್ಮಿತವಾಗಿದೆ. 8ನೇ ಶತಮಾನದಿಂದ 11ನೇ ಶತಮಾನದವರೆಗಿನ ಕನ್ನಡ ನಾಡಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧರ್ಮ, ಆಧ್ಯಾತ್ಮ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
ಮುಡುಬಿ ಗುಂಡೇರಾವ
ಸಂಶೋಧಕ-ಸಾಹಿತಿ, ಸೇಡಂ
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಬಸವರಾಜ ದೇಸಾಯಿ, ಶಿವಲಿಂಗರಾವ ದೇಶಮುಖ, ಅಣವೀರಪ್ಪ ಬೊಮ್ಮನಳ್ಳಿ, ಮಾರುತಿ ಜಗದಾಳೆ, ಮಲ್ಲಣ್ಣ ದೇಸಾಯಿ, ಚಂದ್ರಯ್ಯಸ್ವಾಮಿ, ಶರಣಯ್ಯಸ್ವಾಮಿ, ಮಲ್ಲಣ್ಣ ಭೂತಪೂರ, ಗುಂಡಪ್ಪ ಅಣಕಲ್, ರಾಜಶೇಖರ ಅಣಕಲ್, ರಮೇಶ್ ಕೋರವಾರ, ಆದಿತ್ಯ ಚಿಂಚನಸೂರ, ಸುಧಾಕರ ರೆಡ್ಡಿ, ಗಣೇಶ್ ರೆಡ್ಡಿ, ಶಂಭುಲಿಂಗ ತಡಕಲ್, ಸಂತೋಷ ಜೀವಣಗಿ, ತಿಪ್ಪಣ್ಣ ಧೂಳಗೊಂಡಿ, ರಾಘವೇಂದ್ರ ವಿಶ್ವಕರ್ಮ ಸೇರಿದಂತೆ ಗ್ರಾಮದ ಅನೇಕರು ಭಾಗವಹಿಸಿದ್ದರು.