ಕೆಎಸ್‌ಆರ್​ಟಿಸಿಯಲ್ಲಿ ಲಂಚಾವತಾರ: ಲಾಂಗ್ ರೂಟ್ ಡ್ಯೂಟಿ ನೀಡಲು ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು

ರಾಜ್ಯ

ಬೆಂಗಳೂರು: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂ ಲಂಚ ಪಡೆದಿರುವ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಮಾಡಲಾಗಿತ್ತು. ಆ ನಂತರ 13 ಜನ ಅಧಿಕಾರಿಗಳು ಅಮಾನತು ಆಗಿದ್ದರು. ಈಗ ಲಂಚ ಪಡೆಯುವ ಸರದಿ ಕೆಎಸ್‌ಆರ್​ಟಿಸಿಗೂ ಕಾಲಿಟ್ಟಿದೆ.

ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದಿರುವದು ಸಾಕ್ಷಿ ಲಭ್ಯವಾಗಿದೆ. ಕೆಎಸ್‌ಆರ್​ಟಿಸಿ ಡಿಪೋ- 1 ರಲ್ಲಿ ಸುಮಾರು 100 ಬಸ್​​ಗಳಿವೆ. ಈ ಬಸ್​​ಗಳು ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಸಂಚರಿಸುತ್ತವೆ. ಇದರಿಂದ ಚಾಲಕ ಮತ್ತು ಕಂಡಕ್ಟರ್​ಗಳಿಗೆ ಸಾವಿರಾರು ರೂ ಭತ್ಯೆ ಮತ್ತು ಒಟಿ ದೊರೆಯುತ್ತದೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್‌ಪೆಕ್ಟರ್ (ATI) ಸಂಗೀತ, ಅಸಿಸ್ಟೆಂಟ್ ಟ್ರಾಫಿಕ್ ಸೂಪರಿಂಟೆಂಡೆಂಟ್ (ATS) ಸ್ವಪ್ನ, ಡ್ರೈವರ್ ಮತ್ತು ಕಂಡಕ್ಟರ್​​ಗಳಿಂದ ಗೂಗಲ್ ಪೇ, ಫೋನ್ ಪೇ ಮೂಲಕ ಲಕ್ಷಾಂತರ ರೂ ಲಂಚ ಪಡೆದಿದ್ದು, ಈ ಬಗ್ಗೆ ಕೆಎಸ್‌ಆರ್​ಟಿಸಿ ಎಂಡಿಗೆ ದಾಖಲೆ ಸಮೇತ ದೂರು ನೀಡಲಾಗಿದೆ.

ಹಣ ನೀಡಿಲ್ಲವೆಂದಾದರೆ ಅಂತಹ ಡ್ರೈವರ್, ಕಂಡಕ್ಟರ್​​ಗಳಿಗೆ ಸರಿಯಾಗಿ ಡ್ಯೂಟಿ ನೀಡದೆ ಮತ್ತು ರಜೆ ನೀಡದೆ ಸತಾಯಿಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಡ್ರೈವರ್, ಕಂಡಕ್ಟರ್​ಗಳು ಅನಿವಾರ್ಯವಾಗಿ ಲಂಚ ನೀಡಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಈ ಇಬ್ಬರು ಅಧಿಕಾರಿಗಳು ಕೇವಲ ಉದಾಹರಣೆ ಅಷ್ಟೇ, ಕೆಎಸ್‌ಆರ್​ಟಿಸಿ ಡಿಪೋಗಳಲ್ಲಿ ಲಂಚ ನೀಡಿದರೆ ಮಾತ್ರ ಡ್ಯೂಟಿ ಎಂಬ ಕೆಟ್ಟ ವ್ಯವಸ್ಥೆ ಜಾರಿಯಲ್ಲಿದ್ದು, ಈ ಹಣದಲ್ಲಿ ಹಿರಿಯ ಅಧಿಕಾರಿಗಳಿಗೂ ಪಾಲಿದೆ ಎಂಬ ಗಂಭೀರ ಆರೋಪವಿದೆ.

ಕೆಎಸ್‌ಆರ್​ಟಿಸಿ ಅಧಿಕಾರಿಗಳು ಲಂಚ ಪಡೆದ ಆರೋಪ: ಸಾರಿಗೆ ಸಚಿವರು ಹೇಳಿದ್ದೆನು ?
ಕೆಎಸ್‌ಆರ್​ಟಿಸಿ ಅಧಿಕಾರಿಗಳು ಲಂಚ ಪಡೆಯುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕೂಡಲೇ ಕ್ರಮ ಕೈಗೊಳ್ಳಲು ಕೆಎಸ್‌ಆರ್​ಟಿಸಿ ಎಂಡಿ ಅಕ್ರಂ ಪಾಷ ಅವರಿಗೆ ಸೂಚನೆ ನೀಡುತ್ತೆನೆ ಎಂದಿದ್ದಾರೆ.

ಒಟ್ಟಿನಲ್ಲಿ, ಹಗಲು ರಾತ್ರಿ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುವ ಕಂಡಕ್ಟರ್, ಡ್ರೈವರ್​​ಗಳ ಬಳಿಯೇ ಈ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದರೆ, ಇವರಿಗೆಲ್ಲ ಹಿರಿಯ ಅಧಿಕಾರಿಗಳ ಬೆಂಬಲ ಇಲ್ಲದೆ ಇರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸರಿಯಾದ ತನಿಖೆ ಮಾಡಿದರೆ ಎಲ್ಲವೂ ಬಯಲಿಗೆ ಬರಲಿದೆ.

Leave a Reply

Your email address will not be published. Required fields are marked *