ಕಲಬುರಗಿ: ಪಾಶ್ಯಾತ್ಯ ಸಂಸ್ಕೃತಿಯ ಪ್ರಭಾವದಿಂದ ಹಿರಿಯರಿಗೆ ಗೌರವ ನೀಡುವ, ಆರೈಕೆ ಮಾಡುವ ಜವಾಬ್ದಾರಿ ಕಡಿಮೆಯಾಗುತ್ತಿರುವದು ವಿಷಾದನೀಯ ಸಂಗತಿ ಎಂದು ನಿವೃತ್ತ ಕೃಷಿ ಅಧಿಕಾರಿ ಹಾಗೂ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆ ಮತ್ತು ಶಿವಾ ಮಂದಿರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನ ತುಂಬಾ ಅವಶ್ಯಕ ಎಂದರು.
ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಸಮಾಜಕ್ಕೆ ಹಿರಿಯರು ಭಾರವಲ್ಲ. ಅವರು ತಮ್ಮಲ್ಲಿರುವ ಹಿರಿತನದ ಜ್ಞಾನ, ಅನುಭವವನ್ನು ಸಮಾಜಕ್ಕೆ ನೀಡಬೇಕು. ಕಿರಿಯರು ಅವರ ಅನುಭವದ ಮಾತುಗಳನ್ನು ಆಲಿಸಿ ಮುನ್ನಡೆಯಬೇಕು. ಎಂತಹ ಸಂದರ್ಭದಲ್ಲಿಯೂ ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. ಹಿರಿಯರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡುವ ಭಾರತೀಯ ಶ್ರೇಷ್ಟ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕಿಯರಾದ ಕಾಶಮ್ಮ, ಚಂದ್ರಲೇಖಾ, ಪೂರ್ಣಿಮಾ, ವಿದ್ಯಾರ್ಥಿ ಪ್ರತಿನಿಧಿ ಆದಿತ್ಯ ಸಿ. ಗಾರಂಪಳ್ಳಿ ಸೇರಿದಂತೆ ಅನೇಕರು ಇದ್ದರು.