ಬೆಂಗಳೂರು: ರಾಜ್ಯದಲ್ಲಿ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ರಿಯಾಯಿತಿ ಘೋಷಿಸಿ ಆದೇಶ ಹೊರಡಿಸಿದೆ. ಈ ಅವಕಾಶವು ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರವರೆಗೆ ಮಾತ್ರ ಲಭ್ಯವಿರಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಯಾರಿಗೆ ರಿಯಾಯಿತಿ ಅನ್ವಯ ?
ಸಾರಿಗೆ ಇಲಾಖೆ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, 2023ರ ಫೆಬ್ರವರಿ 11 ರವರೆಗೆ ದಾಖಲಾಗಿರುವ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಈ ಅವಧಿಯ ನಂತರ ದಾಖಲಾದ ಪ್ರಕರಣಗಳಿಗೆ ರಿಯಾಯಿತಿ ಸಿಗುವುದಿಲ್ಲ. ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಬಾಕಿ ಇರುವ ದಂಡ ಪಾವತಿಸಲು ಜನರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈ ಹಿಂದೆ ಇದೇ ರೀತಿಯ ರಿಯಾಯಿತಿ ನೀಡಿದಾಗ, ಲಕ್ಷಾಂತರ ವಾಹನ ಸವಾರರು ಇದರ ಪ್ರಯೋಜನ ಪಡೆದಿದ್ದರು. ಬಾಕಿ ಉಳಿದಿರುವ ದಂಡವನ್ನು ಪಾವತಿಸಲು ಇದು ಮತ್ತೊಂದು ಉತ್ತಮ ಅವಕಾಶವಾಗಿದ್ದು, ನಿಗದಿತ ಅವಧಿಯೊಳಗೆ ದಂಡ ಪಾವತಿಸಿ ರಿಯಾಯಿತಿಯ ಲಾಭ ಪಡೆಯುವಂತೆ ಸಾರಿಗೆ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ದಂಡವನ್ನು ಆನ್‌ಲೈನ್ ಪೋರ್ಟಲ್‌ಗಳು ಅಥವಾ ಸಂಚಾರ ಪೊಲೀಸ್ ಕಚೇರಿಗಳಲ್ಲಿ ಪಾವತಿಸಬಹುದು.
ಪೊಲೀಸರ ಕೈಗೆ ಸಿಕ್ಕರೆ ಪೂರ್ಣ ದಂಡ: ಸರ್ಕಾರದಿಂದ ರಿಯಾಯಿತಿ ಅವಧಿ ಮುಗಿದ ನಂತರ ನೀವು ದಂಡ ಪಾವತಿ ಮಾಡದೆ ಪೊಲೀಸರ ಕೈಗೆ ಸಿಕ್ಕಲ್ಲಿ ನಿಮ್ಮ ವಾಹನದ ಸಂಚಾರ ನಿಯಮ ಉಲ್ಲಂಘನೆಗೆ ಪೂರ್ಣ ಪ್ರಮಾಣದ ಹಣ ವಸೂಲಿ ಮಾಡಲಾಗುತ್ತದೆ. ಇನ್ನು ನೀವು ದಂಡ ಪಾವತಿ ಮಾಡದಿದ್ದಲ್ಲಿ ಜಪ್ತಿ ಮಾಡಲಾಗುತ್ತದೆ. ಆಗ ಕೋರ್ಟ್‌ಗೆ ಹೋಗಿ ದಂಡ ಪಾವತಿಸಿ ನಿಮ್ಮ ವಾಹನವನ್ನು ಬಿಡಿಸಿಕೊಂಡು ಬರಬೇಕಾಗುತ್ತದೆ. ಹೀಗಾಗಿ ಸರ್ಕಾರದಿಂದ ಶೇ.50 ರಿಯಾಯಿತಿ ಘೋಷಣೆ ಮಾಡಿದ್ದು, ಈಗಲೇ ದಂಡ ಪಾವತಿ ಮಾಡುವಂತೆ ಸಂಚಾರಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಸಿಬ್ಬಂದಿಯಿಂದಲೂ ವಾಹನ ತಪಾಸಣೆ: ಸರ್ಕಾರದ ಆದೇಶದ ಅನ್ವಯ ವಾಹನಗಳ ಆರ್‌ಸಿ ತಪಾಸಣೆ, ಲೈಸೆನ್ಸ್ ಮತ್ತು ಇತರೆ ವಾಹನ ಸಂಚಾರದ ಸಂಬಂಧಿತ ದಾಖಲೆಗಳನ್ನು ಪರಿಶೀಲನೆ ಮಾಡುವುದಕ್ಕೆ ಸಂಚಾರ ಇಲಾಖೆ ಸಾರಿಗೆ ಇಲಾಖೆ ಸಿಬ್ಬಂದಿಗೂ ಅವಕಾಶ ನೀಡಲಾಗಿದೆ. ಈಗ ಕೇವಲ ಸಂಚಾರಿ ವಿಭಾಗದ ಪೊಲಿಸರಷ್ಟೇ ಅಲ್ಲ, ಸಾರಿಗೆ ಇಲಾಖೆ ಸಿಬ್ಬಂದಿಯೂ ನಿಮ್ಮ ವಾಹನಗಳನ್ನು ಸೀಜ್ ಮಾಡಬಹುದು. ಜೊತೆಗೆ ಸರ್ಕಾರದ ನಿಯಮಾವಳಿಯಂತೆ ದಂಡ ವಿಧಿಸಬಹುದು.