ಧರ್ಮ ಆಧ್ಯಾತ್ಮದ ತವರೂರು, ಶಿಕ್ಷಣದ ಕಾಶಿ ಹರಸೂರು: ಮುಡುಬಿ

ಗ್ರಾಮೀಣ

ಕಾಳಗಿ: ಕಲ್ಯಾಣ ಚಾಲುಕ್ಯರ ಮತ್ತು ರಾಷ್ಟ್ರಕೂಟರ ಕಾಲದಲ್ಲಿ ನಾಡಿಗೆ ವಿದ್ಯಾದಾನಗೈದ ಕೀರ್ತಿ ಹರಸೂರು ಗ್ರಾಮಕ್ಕೆ ಸಲ್ಲುತ್ತದೆ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಹರಸೂರ ಗ್ರಾಮದಲ್ಲಿ ಬಸವೇಶ್ವರ ಸೇವಾ ಬಳಗ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ- 28ರಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಹರಸೂರ ಗ್ರಾಮವು ಪ್ರಾಚೀನ ಕಾಲದಲ್ಲಿ ಆಧ್ಯಾತ್ಮದ ತವರೂರಾಗಿತ್ತು. ಗ್ರಾಮದ ಹೆಸರೇ ಸೂಚಿಸುವಂತೆ ಸಾಕ್ಷಾತ ಹರ(ಶಿವ)ನೇ ನೆಲೆ ನಿಂತ ಗ್ರಾಮವು ಹರಸೂರಾಗಿದೆ. ಗ್ರಾಮದಲ್ಲಿ ಶಿವನಿಗೆ ಸೇರಿದಂತೆ ಅವತಾರಗಳು, ಶಿಲ್ಪ ಸ್ಮಾರಕಗಳು, ಹಲವಾರು ದೇವಾಲಯಗಳ ಕುರುಹುಗಳು ದೊರೆತಿವೆ. ಶಿವಪುರ, ಹರಪುರ ನಂತರ ಹರಸೂರ ಎಂಬುದು ಗ್ರಾಮದ ನಾಮವಾಗಿದೆ. ಗ್ರಾಮದಲ್ಲಿ ಭವ್ಯವಾದ ಈಶ್ವರ ದೇವಾಲ ಕಲಾತ್ಮಕವಾಗಿದೆ. ಕಲೆ, ವಾಸ್ತು ಶಿಲ್ಪ ಮನೋಜ್ಞವಾಗಿವೆ. ಹೆಜ್ಜೆ ಹಜ್ಜೆಗೂ ಸ್ಮಾರಕಗಳು, ವೀರಗಲ್ಲುಗಳು, ದೇವಾನು ದೇವತೆಗಳ ಶಿಲ್ಪಗಳು, ಜೈನ ಪಾರ್ಶ್ವನಾಥ ತೀರ್ಥಂಕರ ಬಸೀದಿಯು ಗಮನ ಸೆಳೆಯುತ್ತವೆ. ಗ್ರಾಮದಲ್ಲಿ ನಾಲ್ಕು ಶಾಸನಗಳು ದೊರೆತಿವೆ. ಈಶ್ವರ ದೇವಾಲಯದಲ್ಲಿ ಒಂದು ಮತ್ತು ಜೈನ ಬಸೀದಿಯಲ್ಲಿ ಎರಡು ಶಾಸನಗಳು ಲಭ್ಯವಾಗಿವೆ. ಶಾಸನಗಳ ಪ್ರಕಾರ ಗೊಂಕರಸ ಪ್ರಭುನಾಚರಸರ ಆಡಳಿತದಲ್ಲಿ ಕೇತಿಶೆಟ್ಟಿ ಎಂಬ ವ್ಯಾಪಾರಿಯು ಬಾಳೇಶ್ವರ ದೇವರಿಗೆ ಹೂದೋಟವನ್ನು ದತ್ತಿಯಾಗಿ ನೀಡಿದ್ದು ಶ್ಲಾಘನೀಯ ಎಂದರು.

ಕ್ರಿ.ಶ 1172ರ ಶಾಸನದ ಪ್ರಕಾರ ಕಳಚೂರ ರಾಜಮನೆತನದ ರಾಯಮುರಾರಿ ಸೋವಿದೇವನು ಈಶ್ವರ ದೇವಾಲಯಕ್ಕೆ ದೇಣಿಗೆ ನೀಡಿ ಪ್ರೋತ್ಸಾಹಿಸಿದ್ದನು. ಆಲಂದ ಸಾಸಿರ ನಾಡಿನ ಮಹಾದಂಡನಾಯಕ ಮಾಧವಯ್ಯನು ಮನ್ನೆಯ ಸಿಂಹ ರಾಮರಸ, ಮಹಾಮಂಡಲೇಶ್ವರ ವೀರಗೊಂಕರಸರೊಡಗೂಡಿ ಶಾಲೆಯ ಸೀಮಳದ (ಹರಸೂರ) ಭೋಗೇಶ್ವರ ದೇವರಂಗಭೋಗಕ್ಕಾಗಿ ಗೊಂಕನೂರಿಪ್ಪತ್ತರ ಬಳಿಯ ಅಂಕಲಿಗೆಯ ಸೀಮೆಯ ಜಮೀನುಗಳನ್ನು ಉಂಬಳಿಯಾಗಿ ನೀಡಲಾಗಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಗ್ರಾಮದ ಇತಿಹಾಸ ತುಂಬಾ ರೋಚಕವಾಗಿದೆ ಎಂದರು.

ಬಳಗದ ಅಧ್ಯಕ್ಷ ಪ್ರೊ. ಹೆಚ್ ಬಿ ಪಾಟೀಲ ಮಾತನಾಡಿ, ಬಳಗದ ವತಿಯಿಂದ ಕಳೆದ ಒಂದುವರೆ ವರ್ಷದಿಂದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಅಭಿಯಾನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೆವೆ. ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬ ಗ್ರಾಮಸ್ಥರು ಮಾಡಬೇಕು ಎಂದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಸರಡಗಿ ಮಾತನಾಡಿ, ಗ್ರಾಮದ ಹಿನ್ನಲೆ ಕುರಿತು ಬಹಳ ಅದ್ಭುತವಾಗಿ ನಮಗೆ ತಿಳಿಸಿಕೊಟ್ಟಿರುವದು ನಿಜಕ್ಕೂ ಶ್ಲಾಘನೀಯ, ಮುಂದಿನ ದಿನಗಳಲ್ಲಿ ಸ್ಮಾರಕಗಳ ರಕ್ಷಣೆಗೆ ಗ್ರಾಮಸ್ಥರು ಶ್ರಮಿಸುತ್ತೆವೆ ಎಂದರು.

ಹರಸೂರ ಗ್ರಾಮವು ಪ್ರಾಚೀನ ಕಾಲದಲ್ಲಿ ಶಾಲೆಯ ಸೀಮಳ, ಹರ(ಶಿವ) ದೇವಾನು ದೇವರುಗಳು ನೆಲೆನಿಂತ ಪವಿತ್ರ ಕ್ಷೇತ್ರವಾಗಿದೆ, ಧರ್ಮ, ಆಧ್ಯಾತದ ತವರೂರಾಗಿ ಕರುನಾಡಿನಲ್ಲಿ ಕಂಗೊಳಿಸಿದೆ. ಹರಸೂರು ಅಗ್ರಹಾರವು ನಾಡಿಗೆ ವಿದ್ಯಾನಗೈದಿದೆ. ಕನ್ನಡಿಗರ ಸಾಧನೆಗಳನ್ನು ಸಾರುವ ಶಾಸನಗಳು, ವೀರಗಲ್ಲು, ಸ್ಮಾರಕಗಳು ಗ್ರಾಮದಲ್ಲಿ ಇಂದಿಗೂ ಸಾಕ್ಷಿಯಾಗಿ ನಿಂತಿವೆ. ಕಲ್ಯಾಣ ಚಾಲುಕ್ಯರ ಆರನೇಯ ವಿಕ್ರಮಾದಿತ್ಯನ ಕಾಲದ ಮಾಂಡಲಿಕ ಆರಸ ವೀರಗೊಂಕರಸರು, ಆಲಂದಿ ಸಾಸಿರ ನಾಡಿನ ಮಾಧವಯ್ಯ ದಂಡನಾಕ ಗ್ರಾಮದಲ್ಲಿ ನಡೆಯುವ ಆಧ್ಯಾತ್ಮಿಕ, ಶೈಕ್ಷಣಿಕ ಚಟುವಟಕೆಗಳಿಗೆ ದಾನ ದತ್ತಿಗಳನ್ನು ನೀಡಿದ ವಿವರಣೆ ಶಾಸನಗಳಿಂದ ತಿಳಿದುಬರುತ್ತದೆ.

ಮುಡುಬಿ ಗುಂಡೇರಾವ
ಸಂಸೋಧಕ ಸಾಹಿತಿಗಳು

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿದ್ದು ಮಾಲಿಪಾಟೀಲ, ಕೆಸಿ ಪಾಟೀಲ, ಚಂದ್ರಕಾಂತ ಗುಡ್ಡಾ, ಬಸವರಾಜ ದುರ್ಗದ, ಜಗದೇವಪ್ಪ ಸರಡಗಿ, ಧರ್ಮರಾಜ ಹಳ್ಳದ, ಶಿವರಾಯ ಕೋರಿ, ಶರಣು ಡಿಗ್ಗಿ, ಅನಿಲಕುಮಾರ ಪೂಜಾರಿ, ಶಿವಶಂಕರ ಸ್ಥಾವರಮಠ, ಶರಣು ಜೀವಣಗಿ, ಮಾಧು ಮಂಗಳಗಿ, ಮಹೇಶ ತಡಕಲ, ಲೋಕೇಶ ಗುತ್ತೇದಾರ ಸೇರಿದಂತೆ ಅನೇಕರು ಇದ್ದರು.



Leave a Reply

Your email address will not be published. Required fields are marked *