ಬೆಂಗಳೂರು: ರಾಜ್ಯದ ಚಿಕ್ಕಮಗಳೂರು, ಕೊಡಗು ಮತ್ತು ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರವಿವಾರ ಧಾರಾಕಾರ ಮಳೆಯಾಗಿದೆ.
ಮಳೆಯ ಅಬ್ಬರಕ್ಕೆ ಮಲೆನಾಡಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕುದುರೆ ಮುಖ ಭಾಗದಲ್ಲಿ ಭಾರಿ ಮಳೆ ಇದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ.
ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ದೇಗುಲದ ವಾಹನ ನಿಲುಗಡೆ ತಾಣದಲ್ಲಿದ್ದ ವಾಹನಗಳು ನೀರಿನಲ್ಲಿ ಮುಳುಗಿವೆ. ಆಸುಪಾಸಿನ ಜಮೀನು, ತೋಟಗಳಿಗೆ ನೀರು ನುಗ್ಗಿದೆ.
ಕೊಪ್ಪ, ಕಳಸ, ಎನ್.ಆರ್ ಪುರ, ಮೂಡಿಗೆರೆ ವ್ಯಾಪ್ತಿಯಲ್ಲಿ ಜೋರು ಮಳೆ ಇದೆ. ಚಾರ್ಮಾಡಿ ಘಾಟಿಯಲ್ಲಿ ಜೋರು ಮಳೆಯಿಂದಾಗಿ ವಾಹನ ಸವಾರರು ಪರದಾಡಿದರು.
ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ಮತ್ತು ಚಿಕ್ಕಮಗಳೂರು ತಾಲೂಕಿನ 5 ಹೋಬಳಿ ವ್ಯಾಪ್ತಿಯಲ್ಲಿ ಶಾಲೆ, ಅಂಗನವಾಡಿ ಮತ್ತು ಶಿಶುಪಾಲನಾ ಕೇಂದ್ರಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
ಕೊಡಗಿನಲ್ಲಿ ಆರೆಂಜ್ ಅಲರ್ಟ್: ಕೊಡಗು ಜಿಲ್ಲೆಯ ಮಡಿಕೇರಿ ನಗರ, ವಿರಾಜಪೇಟೆ ಭಾಗಗಳಲ್ಲಿ ಮಳೆ ಬಿರುಸಾಗಿದೆ. ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಡಿಕೇರಿ ತಾಲೂಕಿನ ಹೆರವನಾಡುನಲ್ಲಿ ವಿದ್ಯುತ್ ಕಂಬ ಬಿದ್ದು, ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಶ್ರೀಮಂಗಲ ಮತ್ತು ಕೊಡ್ಲಿಪೇಟೆಯಲ್ಲಿ ತಲಾ 8 ಸೆಂ.ಮೀ, ಸಂಪಾಜೆ, ಶನಿವಾರಸಂತೆ, ಶಾಂತಳ್ಳಿಯಲ್ಲಿ ತಲಾ 7.6 ಸೆಂ.ಮೀ, ಮಡಿಕೇರಿ 5.5, ಭಾಗಮಂಡಲ, ನಾಪೋಕ್ಲು, ವಿರಾಜಪೇಟೆ, ಹುದಿಕೇರಿಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.
ಕಲಬುರಗಿ, ಯಾದಗಿರಿಯಲ್ಲಿ ಭಾರಿ ಮಳೆ: ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧೆಡೆ ರವಿವಾರ ಉತ್ತಮ ಮಳೆ ಸುರಿಯಿತು. ಬೀದರ್-ಶ್ರೀರಂಗಪಟ್ಟಣದ ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಮೇಲೆ ನೀರು ಹರಿಯಿತು.
ಶಿವಮೊಗ್ಗ ವರದಿ: ಜಿಲ್ಲೆಯ ವಿವಿಧೆಡೆ ಇಡಿ ದಿನ ಮಳೆ ಇದ್ದು, ತುಂಗಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ತುಂಗಾ ಜಲಾಶಯ ಭರ್ತಿಯಾಗಿದೆ.
ದಾವಣಗೆರೆ ನಗರದಲ್ಲೂ ರವಿವಾರ ಬೆಳಿಗ್ಗೆಯಿಂದ ಸಂಜೆವರೆಗೂ ಬಿಟ್ಟು ಬಿಟ್ಟು ವರ್ಷಧಾರೆಯಾಗಿದೆ. ಚಿತ್ರದುರ್ಗ ನಗರದಲ್ಲಿ ಸೋನೆ ಮಳೆಯಾಗುತ್ತಿದೆ. ಮೊಳಕಾಲ್ಮುರು ತಾಲೂಕಿನಾದ್ಯಂತ ಸೋನೆ ಮತ್ತು ಆಗಾಗ ಜೋರಾಗಿ ಸುರಿಯುತ್ತಿದೆ.
5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಧಾರಾಕಾರ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ
ಸೋಮವಾರ 5 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಹಾಗೂ 4 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ
ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ‘ರೆಡ್ ಅಲರ್ಟ್’ ಘೋಷಿಸಿದೆ.
ಕಲಬುರಗಿ, ವಿಜಯಪುರ, ಬೆಳಗಾವಿ ಮತ್ತು ಕೊಡಗು ಜಿಲ್ಲೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ನಿರಂತರ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಮೀನುಗಾರರು ಸಮುದ್ರಕ್ಕೆ ಹೋಗಬಾರದು ಎಂದು ಇಲಾಖೆ ಎಚ್ಚರಿಸಿದೆ. ಬೆಂಗಳೂರಿನಲ್ಲಿ ಒಂದು ವಾರ ಮೋಡ ಕವಿದ ವಾತಾವರಣ ಇರಲಿದ್ದು ಸಾಧಾರಣ ಮಳೆ ಆಗಬಹುದು. ಕರಾವಳಿ ಸೇರಿದಂತೆ ವಿವಿಧೆಡೆ ಮಂಗಳವಾರ ಮತ್ತು ಬುಧವಾರವೂ ಭಾರಿ ಮಳೆ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.