ಕಲಬುರಗಿ: ಭಾರತ ದೇಶ ಅನೇಕ ಧರ್ಮ, ಸಮುದಾಯ, ಭಾಷೆ, ಪ್ರದೇಶಗಳು, ಅಪರೂಪದ ವಾಸ್ತುಶಿಲ್ಪಗಳು, ಕಲಾಕೃತಿಗಳು, ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು ದೊಡ್ಡ ಮ್ಯೂಸಿಯಂ ಆಗಿದೆ. ವಿಶ್ವದ ಯಾವುದೇ ಕಲಾವಿದನಿಗೆ ನಮ್ಮ ದೇಶವೇ ಆಧಾರವಾಗಿದ್ದು, ಇಲ್ಲಿಗೆ ಆಗಮಿಸಿ ಅಧ್ಯಯನ ಮಾಡುತ್ತಿದ್ದಾರೆ. ದೇಶದಲ್ಲಿರುವ ಅಪರೂಪದ ಕಲಾಕೃತಿಗಳು, ಐತಿಹಾಸಿಕ ಸ್ಥಳಗಳು, ಸ್ಮಾರಕಗಳನ್ನು ರಕ್ಷಿಸಿ, ಮುಂದಿನ ಜನಾಂಗಕ್ಕೆ ಮುಟ್ಟಿಸುವ ಕಾರ್ಯವಾಗಬೇಕಾಗಿದೆ ಎಂದು ಅಂತಾರಾಷ್ಟೀಯ ಖ್ಯಾತ ಚಿತ್ರ ಕಲಾವಿದ ಡಾ.ಸುಬ್ಬಯ್ಯ ಎಂ.ನೀಲಾ ಅಭಿಮತಪಟ್ಟರು.
ನಗರದ ಅಗ್ನಿಶಾಮಕ ಠಾಣೆಯ ಎದುರುಗಡೆಯಿರುವ ಮಹಾಲಕ್ಷ್ಮಿ ನಗರದ ನೀಲಾ ಆರ್ಟ್ ಗ್ಯಾಲರಿ’ಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಸಂಜೆ ಏರ್ಪಡಿಸಿದ್ದ ‘ಅಂತಾರಾಷ್ಟೀಯ ಕಲಾವಿದರ ದಿನಾಚರಣೆ’ಯಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ನೈಜ ಕಲಾವಿದರನ್ನು ಗುರ್ತಿಸಬೇಕು. ದೃಶ್ಯಕಲೆಯು ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮವಾಗಿದ್ದು, ಇದು ಮನುಷ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸಮಾಜದಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ, ಅವುಗಳಿಗೆ ಪರಿಹಾರ ಸೂಚಿಸಿ ಸಮಾಜದ ಸಮತೋಲನ ಸ್ಥಿತಿಯನ್ನು ಕಾಪಾಡುವ ಶಕ್ತಿ ದೃಶ್ಯಕಲೆಗಿದೆ. ಚಿತ್ರಕಲೆಗಳು ಸಮಾಜದ ಸಂಸ್ಕೃತಿ, ಪರಂಪರೆಯ ಕುರುಹುಗಳಾಗಿವೆ. ಕಲೆಯು ಮುಂದಿನ ಪೀಳಿಗೆಯಲ್ಲಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕಲೆ ಮತ್ತು ಕಲಾವಿದರಿಗೆ ಜಾತಿ, ಧರ್ಮ, ವ್ಯಾಪ್ತಿ, ಪ್ರದೇಶಗಳಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ನಾಗೇಶ ದೇಗಾಂವ, ಬಡಾವಣೆಯ ಶಿವಕುಮಾರ ಬಾಳ್ಳಿ, ವಿಜಯಕುಮಾರ ಮಠಪತಿ, ವಿಜಯಕುಮಾರ ಬೂದಿ, ನೀಲಾ ಕುಟುಂಬದ ಶರಣಮ್ಮ ಎಸ್.ನೀಲಾ, ಅಕ್ಷರಾ ಕೆ.ನೀಲಾ ಸೇರಿದಂತೆ ಅನೇಕರು ಇದ್ದರು.