ಅಹ್ಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ನಡೆದು ಜಾಸ್ತಿ ದಿನ ಕಳೆದಿಲ್ಲ, ಅದೆ ರೀತಿ ಈಗ ಮತ್ತೊಂದು ವಿಮಾನ ದುರಂತ ಲಂಡನ್‌ನಲ್ಲಿ ನಡೆದಿದೆ, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದಿದೆ.
ಲಂಡನ್ ಸೌಥೆಂಡ್‌ವಿಮಾನ ನಿಲ್ದಾಣದಿಂದ ಟೇಕಾಫ್ ಆದ ವಿಮಾನವೂ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದೆ.
ಈ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ. ಬೀಚ್‌ಕ್ರಾಫ್ಟ್ ಬಿ200 ಎಂಬ ಪ್ರಯಾಣಿಕ ವಿಮಾನವ ಪತನಗೊಂಡಿದೆ, ಈಸಿ ಜೆಟ್ ಕಂಪನಿಗೆ ಸೇರಿದ ಈ ಸಣ್ಣ ವಿಮಾನ ಲಂಡನ್ ಸೌಥೆಂಡ್‌ನಿಂದ ನೆದರ್‌ಲ್ಯಾಂಡ್ಸ್‌ನ ಲೆಲಿಸ್ಟಾಡ್ ವಿಮಾನ ನಿಲ್ದಾಣಕ್ಕೆ ಹೋಗುತ್ತಿತ್ತು. ನಿನ್ನೆ ಸ್ಥಳೀಯ ಕಾಲಮಾನ ಸಂಜೆ ನಾಲ್ಕು ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಈ ಸಣ್ಣ ವಿಮಾನ 12 ಮೀಟರ್ ಉದ್ದವಿತ್ತು.
ಹೀಗೆ ವಿಮಾನ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವವರೆಗೂ ಈ ಸೌಥೆಂಡ್ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಈಸಿ ಜೆಟ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಬ್ರಿಟನ್‌ನ ದಕ್ಷಿಣ ಭಾಗದಲ್ಲಿರುವ ಈ ವಿಮಾನ ನಿಲ್ದಾಣವನ್ನು ತಮ್ಮ ನೆಲೆಯಾಗಿ ಬಳಸುತ್ತವೆ. ಪ್ರತಿ ವಾರ 20 ಮಾರ್ಗಗಳಲ್ಲಿ 122 ವಿಮಾನಗಳನ್ನು ಈಸಿ ಜೆಟ್ ನಿರ್ವಹಿಸುತ್ತದೆ. ದುರ್ಘಟನೆಯ ನಂತರ, ಪ್ಯಾರಿಸ್, ಅಲಿಕಾಂಟೆ, ಫಾರೋ, ಪಾಲ್ಮಾ, ಮಲ್ಲೋರ್ಕಾಗಳಿಗೆ ಹೋಗುವ ವಿಮಾನಗಳನ್ನು ಈಸಿ ಜೆಟ್ ರದ್ದುಗೊಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಮಾನ ಪತನದ ನಂತರದ ವೀಡಿಯೋ ವೈರಲ್ ಆಗಿದ್ದು ಘಟನಾ ಸ್ಥಳದಲ್ಲಿ ಆಕಾಶದೆತ್ತರಕ್ಕೆ ದಟ್ಟ ಹೊಗೆ ಆವರಿಸಿರುವುದನ್ನು ಕಾಣಬಹುದು. ಆದರೆ ಅಪಘಾತಕ್ಕೀಡಾದ ವಿಮಾನವನ್ನು ನೆದರ್ಲ್ಯಾಂಡ್ಸ್ ಮೂಲದ ಜ್ಯೂಷ್ ಏವಿಯೇಷನ್ ಸಂಸ್ಥೆ ನಿರ್ವಹಿಸುತ್ತಿತ್ತು. ಇದು ರವಿವಾರ ಮುಂಜಾನೆ ಗ್ರೀಸ್‌ನ ಅಥೆನ್ಸ್‌ನಿಂದ ಕ್ರೊಯೇಷಿಯಾದ ಪುಲಾಗೆ ಹೋಗಿದ್ದು, ಬಳಿಕ ಅಲ್ಲಿಂದ ಸೌತೆಂಡ್‌ನಿಂದ ಹಾರಿತ್ತು. ಅದೇ ಸಂಜೆ ಅದು ನೆದರ್‌ಲ್ಯಾಂಡ್ಸ್‌ನ ಲೆಲಿಸ್ಟಾಡ್‌ಗೆ ಹಿಂತಿರುಗಬೇಕಿತ್ತು. ಆದರೆ ಅಷ್ಟರಲ್ಲಿ ಅಪಘಾತ ಸಂಭವಿಸಿ ಇಡಿ ವಿಮಾನವೇ ಧ್ವಂಸಗೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಜ್ಯೂಷ್ ಏವಿಯೇಷನ್ ಪ್ರತಿಕ್ರಿಯಿಸಿದ್ದು, ಈ ದುರಂತದಲ್ಲಿ ಬಲಿಯಾದವರ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ವಿಮಾನವು ಬೀಚ್‌ಕ್ರಾಫ್ಟ್ ಬಿ200 ಸೂಪರ್ ಕಿಂಗ್ ಏರ್ ಆಗಿದ್ದು ರೋಗಿಗಳನ್ನು ಸಾಗಿಸಲು ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾದ 12 ಮೀಟರ್ ಉದ್ದದ ಟರ್ಬೊಪ್ರೊಪ್ ಹೊಂದಿದೆ.
ಭಾರತದ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ವಿಮಾನ ಕಳೆದ ತಿಂಗಳು ಇದೆ ರೀತಿ ಪತನಗೊಂಡಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 241 ಪ್ರಯಾಣಿಕರು ಸೇರಿದಂತೆ 260 ಜನರು ಸಾವನ್ನಪ್ಪಿದ್ದರು. ಈ ಘಟನೆ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹಲವು ಹಂತದ ತನಿಖೆಗಳು ನಡೆಯುತ್ತಿವೆ. ವಿಮಾನ ಪತನಕ್ಕೆ ಕಾರಣವೇನು ಎಂದು ತನಿಖೆ ಚುರುಕುಗೊಂಡಿದೆ. ಮೊದಲ ಹಂತದ ತನಿಖಾ ವರದಿ ಹೊರಬಿದ್ದಿದ್ದು, ವಿಮಾನಕ್ಕೆ ಅಗತ್ಯವಿರುವ ಇಂಧನವನ್ನು ಕಡಿತಗೊಳಿಸಿದ್ದೇ ಪತನಕ್ಕೆ ಕಾರಣ ಎಂದು ವರದಿ ಹೇಳಿದೆ. ಈ ಘಟನೆ ಮರೆಯಾಗುವ ಮುನ್ನವೇ ಈಗ ಲಂಡನ್‌ನಲ್ಲಿ ಮತ್ತೊಂದು ವಿಮಾನ ದುರಂತ ಸಂಭವಿಸಿದ್ದು, ವಿಮಾನದಲ್ಲಿ ಸಾಗುವವರ ಆತಂಕ ಹೆಚ್ಚಿಸಿದೆ.