ಇನ್ನುಮುಂದೆ ಸರ್ಕಾರಿ ಬಸ್ಸಿನಲ್ಲಿ ಪ್ರಾಣಿಗಳ ಜೊತೆಗೆ ಟಯರ್‌, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸಾಗಿಸಬಹುದು, ಯಾವುದಕ್ಕೆ ಎಷ್ಟು ದರ ?

ರಾಜ್ಯ

ಬೆಂಗಳೂರು: ಇನ್ನುಮುಂದೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಾಣಿಗಳು, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸಹ ಸಾಗಿಸಬಹುದು. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಈಗ ಆದಾಯ ಸಂಗ್ರಹಿಸಲು ನಾನಾ ದಾರಿ ಹುಡುಕುತ್ತಿರುವ ಕೆಎಸ್‌ಆರ್‌ಟಿಸಿ ಲಗೇಜ್‌ಗೆ ಹೊಸ ದರ ನಿಗದಿ ಮಾಡಿದೆ.

ಗರಿಷ್ಠ 30 ಕೆಜಿ ಮೇಲೆ ಲಗೇಜ್‌ ಇದ್ದರೆ ಕಡ್ಡಾಯವಾಗಿ ಹಣವನ್ನು ಪಾವತಿ ಮಾಡಲೇಬೇಕಾಗುತ್ತದೆ. ನಾಯಿಯನ್ನ ಚೈನಿನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ಸಿನಲ್ಲಿ ಸಾಗಿಸಬಹುದು. ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದು.

ಪ್ರಯಾಣಿಕರು 4 ಅಥವಾ 5 ಜನರು ಗುಂಪಿನಲ್ಲಿ ಪ್ರಯಾಣಿಸುತ್ತಿದ್ದು. ಒಂದು ಬ್ಯಾಗ್ ಅಥವಾ ಬಂಡಲ್ ಲಗೇಜ್ ಕೊಂಡೊಯ್ಯುತ್ತಿದ್ದಲ್ಲಿ ಉಚಿತ ಸಾಗಣೆಯು ಒಬ್ಬ ಪ್ರಯಾಣಿಕರಿಗೆ ಮಾತ್ರ (30 ಕೆಜಿ) ಅನ್ವಯಿಸುತ್ತದೆ. ಒಬ್ಬರು ಮಾತ್ರ ಉಚಿತವಾಗಿ ಲಗೇಜ್ ಕೊಂಡೊಯ್ಯಬಹುದು.

ಪ್ರಯಾಣಿಕರು ಲಗೇಜ್ ಸರಿಯಾಗಿ ತೂಕ ಮಾಡಿಸಿಕೊಂಡು ಬರಬೇಕಾಗುತ್ತದೆ. ಯಂತ್ರದ ತೂಕವಿಲ್ಲದಿದ್ದರೆ ಅಂದಾಜು ತೂಕದ ಲಗೇಜ್ ಪರಿಗಣಿಸಲಾಗುತ್ತದೆ.

ಏನೇನು ತೆಗೆದುಕೊಂಡು ಹೋಗಬಹುದು ?
ವಾಷಿಂಗ್ ಮೆಷಿನ್, ಫ್ರಿಡ್ಜ್, ಟ್ರಕ್‌ ಟಯರ್‌, ಅಲ್ಯೂಮಿನಿಯಂ ಪೈಪ್, ಪಾತ್ರೆ, ಕಬ್ಬಿಣದ ಪೈಪ್, ಬೆಕ್ಕು, ನಾಯಿ, ಮೊಲವನ್ನು ಸಾಗಿಸಬಹುದು‌‌.

ದರ ಹೇಗೆ ?
ಎಸಿ ಮತ್ತು ನಾನ್‌ ಎಸಿ ಬಸ್ಸುಗಳಿಗೆ ಪ್ರತ್ಯೇಕ ದರವನ್ನು ನಿಗದಿ ಮಾಡಲಾಗಿದೆ. ನಾನ್‌ ಎಸಿ ಬಸ್ಸುಗಳಿಗೆ 1-5 ಹಂತದವರೆಗೆ 5 ರೂ. ದರ ನಿಗದಿ ಆಗಿದ್ದರೆ ಎಸಿ ಬಸ್ಸುಗಳಲ್ಲಿ 10 ರೂ. ದರವನ್ನು ನಿಗದಿ ಮಾಡಲಾಗಿದೆ. 51 ರಿಂದ 55 ಹಂತದವರೆಗಿನ ನಾನ್‌ ಎಸಿ ಬಸ್ಸುಗಳಿಗೆ 44 ರೂ, ನಾನ್‌ ಎಸಿ ಬಸ್ಸುಗಳಿಗೆ 55 ರೂ. ದರವನ್ನು ನಿಗದಿ ಮಾಡಲಾಗಿದೆ.

ಸಾಕು ಪ್ರಾಣಿಗಳನ್ನು ಉಚಿತವಾಗಿ ಪ್ರಯಾಣಿಸಲು ಅನುಮತಿ ಇಲ್ಲ. ನಾಯಿಯನ್ನು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ ದರ ವಿಧಿಸಿದ್ದರೆ ಮೊಲ, ನಾಯಿ ಮರಿ, ಬೆಕ್ಕು, ಪಂಜರದಲ್ಲಿರುವ ಪಕ್ಷಿಗೆ ಮಕ್ಕಳದ ದರವನ್ನು ವಿಧಿಸಲಾಗುತ್ತದೆ. ರೇಷ್ಮೆ ಗೂಡನ್ನು ಪ್ರತಿ 15 ಕೆಜಿಗೆ 1 ಯೂನಿಟ್‌ನಂತೆ ಪರಿಗಣಿಸಲಾಗುತ್ತದೆ.

Leave a Reply

Your email address will not be published. Required fields are marked *