ಮದುವೆ ಮಂಟಪದಲ್ಲೆ ಪತಿಗೆ ಚಪ್ಪಲಿಯಿಂದ ಥಳಿಸಿದ ಪತ್ನಿ

ಜಿಲ್ಲೆ

ಚಿತ್ರದುರ್ಗ: ವರದಕ್ಷಿಣೆ ದುರಾಸೆಗೆ 2ನೇ ಮದುವೆಯಾಗಲು ಮುಂದಾಗಿದ್ದ ಪತಿಗೆ ಕಲ್ಯಾಣ ಮಂಟಪದಲ್ಲೆ ಪತ್ನಿ ತನ್ನ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ತಡರಾತ್ರಿ ಜರುಗಿದೆ.

ಪತ್ನಿ, ಆಕೆಯ ಕುಟುಂಬಸ್ಥರಿಂದ ಪತಿ ಮತ್ತು ಆತನ ಕಡೆಯವರಿಗೆ ಸಖತ್ತಾಗಿ ಧರ್ಮದೇಟು ಬಿದ್ದವು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಈ ಘಟನೆಯಿಂದ ನವ ವಧು ಮತ್ತು ಕುಟುಂಬದವರು ಕಕ್ಕಾಬಿಕ್ಕಿಯಾದರು.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮುಶೇನಾಳ ಗ್ರಾಮದ ತನುಜಾ 4 ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆಯ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ ಎಂಬಾತನನ್ನು ವಿವಾಹವಾಗಿದ್ದರು. ಈತ ಯಾರಿಗೂ ಗೊತ್ತಾಗದಂತೆ ಚಿತ್ರದುರ್ಗದಲ್ಲಿ 2ನೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದನು.

ಈ ವಿಷಯ ತಿಳಿದ ಕೂಡಲೇ ಕಲ್ಯಾಣ ಮಂಟಪಕ್ಕೆ ಏಕಾಏಕಿ ನುಗ್ಗಿದ ಪತ್ನಿಯು ಪತಿಯ ಮುಖ, ಮೂತಿ ನೋಡದೆ ಚಪ್ಪಲಿಯಿಂದ ಸಿಕ್ಕಾಪಟ್ಟೆ ಧರ್ಮದೇಟು ನೀಡಿದಳು. ಇದನ್ನು ಪ್ರಶ್ನಿಸಲು ಮುಂದಾದ ಪತಿಯ ಕಡೆಯವರಿಗೂ ಜೋರಾಗಿ ಏಟುಗಳು ಬಿದ್ದವು.

ವರದಕ್ಷಿಣೆ ಆಸೆಗೆ ಕಾರ್ತಿಕ್ ಮತ್ತೊಮ್ಮೆ ಮದುವೆ ಆಗುತ್ತಿರುವುದಾಗಿ ಪತ್ನಿಯ ಕಡೆಯವರು ಆರೋಪಿಸಿದರು. ಪರಸ್ಪರ ವಾಗ್ವಾದ, ಕಿತ್ತಾಟದಿಂದ ಕಲ್ಯಾಣ ಮಂಟಪದ ಕೆಲ ಚೇರುಗಳು ಮುರಿದು, ಚೆಲ್ಲಾಪಿಲ್ಲಿಯಾಗಿ ಬಿದ್ದವು.

ಈ ಸಂದರ್ಭದಲ್ಲಿ ಗಾಯಗೊಂಡ ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಬಿಡುಗಡೆಯಾದರು. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌

Leave a Reply

Your email address will not be published. Required fields are marked *