ಗುರುವಿನ ಸ್ಥಾನ ಎಲ್ಲದಕ್ಕಿಂತಲೂ ದೊಡ್ಡದು: ಸಿದ್ದಲಿಂಗ ಶ್ರೀ

ಗ್ರಾಮೀಣ

ಚಿತ್ತಾಪುರ: ಭೂಮಿಯ ಮೇಲಿನ ಎಲ್ಲಾ ವೃತ್ತಿಗಳಲ್ಲಿ ಗುರುವಿನ ಸ್ಥಾನ ತುಂಬಾ ದೊಡ್ಡದು ಎಂದು ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಯಾರು ಜನರ ಅಂಧಕಾರ, ಮೌಢ್ಯತೆ ದೂರ ಮಾಡುತ್ತಾರೋ, ಯಾರು ಉತ್ತಮ ಜೀವನಕ್ಕೆ ಸೂಕ್ತ ಮಾರ್ಗದರ್ಶನ ನೀಡುವರೋ ಅವರು ನಿಜವಾದ ಗುರುಗಳು. ಶಿವಾಜಿಗೆ ಗುರು ರಾಮದಾಸರ ಮಾರ್ಗದರ್ಶನದ ಪ್ರಭಾವ ಬೀರಿತ್ತು. ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದ ಪ್ರಭಾವ ಬೀರಿತ್ತು. ಹೀಗಾಗಿ ಜಗತ್ತಿನಲ್ಲಿ ಸಾಧನೆ ಮಾಡಿರುವ, ಮಾಡುತ್ತಿರುವ ಸರ್ವರಿಗೂ ಗುರುವಿನ ಮಾರ್ಗದರ್ಶನ ಮತ್ತು ಪ್ರೇರಣೆ ಇದ್ದೆ ಇರುತ್ತದೆ. ಹರಮುನಿದರೆ ಗುರು ಕಾಯ್ವನು ಎನ್ನುವಂತೆ ದೇವರು ಬಿಟ್ಟರೂ ಗುರು ಕಾಯುತ್ತಾನೆ ಎನ್ನುವ ಮಾತು ಸತ್ಯ. ಆದ್ದರಿಂದ ಸಮಾಜದಲ್ಲಿ ಗುರುಗಳಿಗೆ ಗೌರವ ಸಿಗಬೇಕು ಅಂದಾಗ ಮಾತ್ರ ಸಮಾಜ ಸುಂದರವಾಗುತ್ತದೆ ಎಂದರು.

ಸಂಸ್ಥೆಯ ವಿವಿಧ ಪ್ರಕಲ್ಪಗಳ ಶಿಕ್ಷಕರು ಮತ್ತು ಗ್ರಾಮಸ್ಥರಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದಂಪತಿಗಳಾದ ಭೀಮಾಶಂಕರ ಬಮ್ಮನಳ್ಳಿ ಹಾಗೂ ವಿಜಯಲಕ್ಷ್ಮಿ ಬಮ್ಮನಳ್ಳಿ ಶ್ರೀಗಳ ಪಾದಪುಜೆ ನೆರವೇರಿಸಿದರು.

ಸಂಸ್ಥೆ ಸದಸ್ಯರಾದ ಸಿದ್ದಲಿಂಗ ಜ್ಯೋತಿ, ಗ್ರಾಮದ ಪ್ರಮುಖರಾದ ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ್, ಮೋಹನ ಸೂರೇ, ಸಾಹೇಬಗೌಡ ತುಮಕೂರ, ಭೀಮರಾವ ಪಾಟೀಲ್, ಶಾಂತು ಬಾಳಿ, ಸಿದ್ದಪ್ಪ ತೋಟದ್ ಪ್ರಾಚಾರ್ಯ ಕೆ.ಐ ಬಡಿಗೇರ್, ವಿದ್ಯಾಧರ ಖಂಡಳ, ಗಂಗಪ್ಪ ಕಟ್ಟಿಮನಿ ಸೇರಿದಂತೆ ಸಂಸ್ಥೆಯ ಶಿಕ್ಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು. ಈರಣ್ಣ ಹಳ್ಳಿ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *