ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು, ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಫಿಕ್ಸ್

ಸುದ್ದಿ ಸಂಗ್ರಹ ವಿಶೇಷ

ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ ಯುವಜನರ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿದೆ. ಹೊರಗೆ ನೋಡಲು ಆರೋಗ್ಯವಾಗಿ ಕಾಣಿಸಿಕೊಂಡರು ಕೂಡ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವಿಗೀಡಾಗುತ್ತಿರುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದು ಹೃದಯಾಘಾತವಲ್, ಇದೊಂದು ಹಠಾತ್ ಹೃದಯ ಸ್ತಂಭನ (SCA- Sudden Cardiac Arrest ) ಎಂಬ ಸೈಲಂಟ್​ ಕಿಲ್ಲರ್​.

ವಿಶ್ವದ ಹೃದಯ ಕಾಯಿಲೆಗಳಲ್ಲಿ ಭಾರತವು ಶೇ.60 ರಷ್ಟು ಪಾಲು ಹೊಂದಿದೆ. ಆದರೆ ನಮ್ಮ ಜನಸಂಖ್ಯೆಯು ವಿಶ್ವದ ಶೇ.20 ಮಾತ್ರ. ಅಮೆರಿಕನ್ ಹಾರ್ಟ್ ಜರ್ನಲ್ ಪ್ರಕಾರ 30 ರಿಂದ 45 ವರ್ಷ ವಯಸ್ಸಿನ ಜನರಲ್ಲಿ ಹೃದಯ ವೈಫಲ್ಯ ಪ್ರಕರಣಗಳ ಸಂಖ್ಯೆ ಶೇ.13 ರಷ್ಟು ಹೆಚ್ಚಾಗಿದೆ. ಈ ಹೆಚ್ಚಳವು 2025ರ ವೇಳೆಗೆ ಮುಂದುವರಿಯುವ ನಿರೀಕ್ಷೆಯಿದೆ.

ಇತ್ತೀಚೆಗೆ ರಾಜ್ಯದಲ್ಲಿ ಸಾಕಷ್ಟು ಯುವಕರು ಕಾರ್ಡಿಯಾಕ್​ ಅರೆಸ್ಟ್​​ಗೆ ಬಲಿಯಾಗಿದ್ದಾರೆ. ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಒಂದೆ ತಿಂಗಳಲ್ಲಿ 20ಕ್ಕೂ ಹೆಚ್ಚು ಜನರು ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ. ಅಘಾತಕಾರಿ ಸಂಗತಿ ಏನೆಂದರೆ, ಹೃದಯಾಘಾತದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಪ್ರತಿನಿತ್ಯ ವರದಿಯಾಗುತ್ತಲಿದೆ. ರಾಜ್ಯದಲ್ಲೂ ಸಾವಿನ ಸರಣಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಒಂದು ಸಮಿತಿಯನ್ನು ರಚನೆ ಮಾಡಿ, ವರದಿ ಕೊಡುವಂತೆ ಸೂಚನೆ ನೀಡಿದೆ.

ಹಠಾತ್​ ಹೃದಯ ಸ್ತಂಭನಕ್ಕೆ ಕಾರಣ ಏನು ? ಈ ಪ್ರಶ್ನೆಗೆ ನಾನಾ ಉತ್ತರವಿದ್ದರೂ ಬಹುಮುಖ್ಯವಾಗಿ ಕೇಳಿಬರುತ್ತಿರುವ ಉತ್ತರವೆಂದರೆ, ಅದು ಆಧುನಿಕ ಜೀವನಶೈಲಿ. ಓಡುತ್ತಿರುವ ಪ್ರಪಂಚದ ಜೊತೆಗೆ ಮನುಷ್ಯನು ಸಹ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿ ಓಡುತ್ತಿದ್ದಾನೆ. ಒತ್ತಡದ ಬದುಕು, ಮೊಬೈಲ್​ ಗೀಳು, ಕಳಪೆ ಆಹಾರಗಳು, ಯಾವುದೆ ದೈಹಿಕ ಚಟುವಟಿಕೆ ಇಲ್ಲದಿರುವುದು ಇವೆಲ್ಲ ಹೃದಯದ ಮೇಲೆ ಒತ್ತಡ ಹಾಕುತ್ತಿವೆ.

ಈ ಬಗ್ಗೆ ಹೈದರಾಬಾದ್‌ನ ಹೋಲಿಸ್ಟಿಕ್ ಆಸ್ಪತ್ರೆಯ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಬಿಜು ಗೋವಿಂದ್ ಸ್ಥಳೀಯ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಹೃದಯಾಘಾತವಲ್ಲ. ಹೃದಯದ ವಿದ್ಯುತ್ ವ್ಯವಸ್ಥೆಯಲ್ಲಿನ ಅಸಹಜತೆಯಿಂದ ಉಂಟಾಗುವ ಹಠಾತ್ ಹೃದಯ ಸ್ತಂಭನ. ಇದು ಕೆಲವೇ ನಿಮಿಷಗಳಲ್ಲಿ ಮಾರಕವಾಗಬಹುದು ಎಂದಿದ್ದಾರೆ.

  • ಜಡ ಜೀವನಶೈಲಿ
  • ವ್ಯಾಯಾಮದ ಕೊರತೆ, ಹೆಚ್ಚಿನ ಒತ್ತಡ
  • ಜಂಕ್ ಫುಡ್, ಧೂಮಪಾನ, ಮದ್ಯಪಾನ
  • ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು
  • ಮೆಟಾಬಾಲಿಕ್ ಸಿಂಡ್ರೋಮ್‌ನ ಹೆಚ್ಚಿದ ಪ್ರಕರಣಗಳು
  • ಅತಿಯಾದ ಮೊಬೈಲ್​ ಬಳಕೆ ಹಾಗೂ ತಡರಾತ್ರಿ ಮಲಗುವ ಅಭ್ಯಾಸ
  • ಕುಟುಂಬದ ಇತಿಹಾಸ/ಆನುವಂಶಿಕ ಸಮಸ್ಯೆಗಳು

190 ಕ್ಕಿಂತ ಹೆಚ್ಚಿನ LDL ಕೊಲೆಸ್ಟ್ರಾಲ್ ಮತ್ತು 50 ವರ್ಷಕ್ಕಿಂತ ಮೊದಲು ಹೃದಯ ಕಾಯಿಲೆಯ ಕುಟುಂಬದ ಇತಿಹಾಸವು ಕೌಟುಂಬಿಕ ಹೈಪರ್ಕೊಲೆಸ್ಟರಾಲ್ಮಿಯಾ ಎಂಬ ಆನುವಂಶಿಕ ಸ್ಥಿತಿಯ ಲಕ್ಷಣಗಳಾಗಿರಬಹುದು ಎಂದು ಡಾ. ಬಿಜು ಹೇಳಿದ್ದಾರೆ.

  • ಎದೆ ನೋವು (10 ನಿಮಿಷಗಳಿಗಿಂತ ಹೆಚ್ಚು)
  • ಎಡಗೈ ಅಥವಾ ದವಡೆಯಲ್ಲಿ ನೋವು
  • ತಲೆತಿರುಗುವಿಕೆ, ಬೆವರುವುದು, ಉಸಿರಾಟದ ತೊಂದರೆ
  • ಯಾವುದೆ ಕಾರಣವಿಲ್ಲದೆ ದಣಿದ ಮತ್ತು ಉಬ್ಬಿರುವ ಭಾವನೆ – ಇವು ಎಚ್ಚರಿಕೆಯ ಚಿಹ್ನೆಗಳಾಗಿರಬಹುದು, ವಿಶೇಷವಾಗಿ ಮಹಿಳೆಯರಲ್ಲಿ.

50% ಮಹಿಳೆಯರಿಗೆ ಎದೆ ನೋವು ಇಲ್ಲದೆ ಹೃದಯ ಸಮಸ್ಯೆಗಳು ಇರುತ್ತವೆ. ಆದ್ದರಿಂದ ನಿಮಗೆ ಯಾವುದೆ ಸಂದೇಹಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

  • 18ನೇ ವಯಸ್ಸಿನಿಂದ ಪ್ರತಿ ವರ್ಷ ಬಿಪಿ ಮತ್ತು ಸಕ್ಕರೆ ಪರೀಕ್ಷೆ
  • ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಎಲ್‌ಡಿಎಲ್ ಕೊಲೆಸ್ಟ್ರಾಲ್ 100 ಕ್ಕಿಂತ ಕಡಿಮೆ ಇರಬೇಕು.
  • ಮೂರು ತಿಂಗಳ ಸಕ್ಕರೆ ಸರಾಸರಿ (ಎಚ್‌ಬಿಎ 1 ಸಿ) 5.7% ಕ್ಕಿಂತ ಕಡಿಮೆ ಇರಬೇಕು
  • ದಿನಕ್ಕೆ ಕನಿಷ್ಠ 10,000 ಹೆಜ್ಜೆ ನಡೆಯಿರಿ
  • ಜಂಕ್ ಫುಡ್ ಅನ್ನು ಕಡಿಮೆ ಮಾಡಿ ಮತ್ತು ಹೃದಯಕ್ಕೆ ಆರೋಗ್ಯಕರ ಆಹಾರವನ್ನು ಸೇವಿಸಿ (ಬಹುಅಪರ್ಯಾಪ್ತ ಕೊಬ್ಬುಗಳು)
  • ಒತ್ತಡ ನಿಯಂತ್ರಿಸಲು ಯೋಗ ಹಾಗೂ ಧ್ಯಾನ ಮಾಡಿ

ಹೃದಯಾಘಾತ ಅಥವಾ ಹೃದಯ ಸ್ತಂಭನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಮೂಲಭೂತ ಆರೋಗ್ಯ ತಪಾಸಣೆಗಳು, ಜೀವನಶೈಲಿಯ ಬದಲಾವಣೆಗಳು ಮತ್ತು ಸಮಯೋಚಿತ ವೈದ್ಯಕೀಯ ಸಲಹೆಯೊಂದಿಗೆ, ಹಠಾತ್ ಹೃದಯ ಸ್ತಂಭನದಂತಹ ಅಪಘಾತಗಳನ್ನು ಸಂಪೂರ್ಣವಾಗಿ ತಡೆಯಬಹುದು. (ಏಜೆನ್ಸೀಸ್​)

Leave a Reply

Your email address will not be published. Required fields are marked *