ಕಲಬುರಗಿ: ದ್ವೇಷದಿಂದ ಯಾವ ಸಾಧನೆಯೂ ಸಾಧ್ಯವಿಲ್ಲ, ಜನರಲ್ಲಿ ಸಹಾನುಭೂತಿ ಬೆಳೆಸಲು ಮತ್ತು ದ್ವೇಷವನ್ನು ತೊರೆದು ಸಕಾರಾತ್ಮಕ ಜೀವನವನ್ನು ಸಾಗಿಸಲು ಕ್ಷಮಾಗುಣ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಜಾಗತಿಕ ಕ್ಷಮೆ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಯಾರಾದರು ನಮ್ಮನ್ನು ಮಾನಸಿಕವಾಗಿ ನೋಯಿಸಿದರೆ, ಆ ಆಘಾತದಿಂದ ಚೇತರಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಅವರನ್ನು ಕ್ಷಮಿಸುವುದು. ಕ್ಷಮೆಯು ಜೀವನದಲ್ಲಿ ಧನಾತ್ಮಕತೆ ತರುತ್ತದೆ ಮತ್ತು ಮನಸ್ಸನ್ನು ಹಗುರವನ್ನಾಗಿಸುತ್ತದೆ. ಇದು ಪ್ರಾಯೋಗಿಕವಾಗಿ ಸುಲಭವಲ್ಲದಿದ್ದರು ಕೂಡಾ ಅನಿವಾರ್ಯವಾಗಿದೆ ಎಂದರು.
ಕ್ಷಮಾಗುಣದಿಂದ ಜೀವನದಲ್ಲಿ ಒಳ್ಳೆಯ ಬದಲಾವಣೆ ತರುತ್ತದೆ. ಹೀಗೆ ಜನರಲ್ಲಿ ಸದ್ಭಾವನೆ ಮತ್ತು ಕ್ಷಮೆಯ ಮನಸ್ಥಿತಿಯನ್ನು ಬೆಳೆಸಲೆಂದೆ ಪ್ರತಿವರ್ಷ ‘ಜುಲೈ-7’ರಂದು ‘ಜಾಗತಿಕ ಕ್ಷಮೆ ದಿನ’ವನ್ನು ಆಚರಿಸಲಾಗುತ್ತದೆ. ಈ ದಿನವು ಒಬ್ಬರಿಗೆ ಬದಲಾಗಲು, ಒಂದು ಅವಕಾಶ ನೀಡುವುದು, ಜನರನ್ನು ಕ್ಷಮಿಸುವುದು ಮತ್ತು ದ್ವೇಷವನ್ನು ಮರೆತು ಆರೋಗ್ಯಕರ ಸಂಬಂಧ ಬಲಪಡಿಸುವುದು ಅತ್ಯಗತ್ಯ ಎಂಬುದನ್ನು ನೆನಪಿಸುತ್ತದೆ. ಇದನ್ನು 1994ರಲ್ಲಿ ಕೆನಡಾದ ‘ಕ್ರಿಶ್ಚಿಯನ್ ಎಂಬಸಿ ಆಫ್ ಕ್ರೈಸ್ಟ್ ಅಂಬಾಸಿಡರ್ಸ್’ ಎಂಬ ಸಂಸ್ಥೆಯು ಪ್ರಾರಂಭಿಸಿತು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಉಪನ್ಯಾಸಕ ಸಿದ್ದಾರೂಢ ಬಿರಾದಾರ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕ ಭೀಮರಾಯ ಎಸ್.ಮುಂಡರಗಿ, ಸುಭಾಷ ಕೇಶ್ವಾರ, ಗಣೇಶ್ ಮತ್ತು ವಿದ್ಯಾರ್ಥಿಗಳು ಇದ್ದರು.