ಕಲಬುರಗಿ: ಅರಣ್ಯ ಇಲಾಖೆಯಲ್ಲಿ 6000 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 540 ಹುದ್ದೆಗಳ ಭರ್ತಿ ಆರಂಭವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 540 ಹುದ್ದೆಗಳ ಜೊತೆಗೆ 340 ಹುದ್ದೆಗಳ ನೇಮಕಾತಿಗೆ ಮುಂದಾಗಲಾಗುವುದು ಎಂದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಹುಲಿಗಳಿಗೆ ವಿಷಪ್ರಾಷನ ಮಾಡಿದ್ದು ವರದಿಯಲ್ಲಿ ಗೊತ್ತಾಗಿದೆ. ಪ್ರಮುಖವಾಗಿ ಕರ್ತವ್ಯ ಲೋಪ ಆರೋಪದ ಮೇಲೆ ಇಬ್ಬರು ಅಧಿಕಾರಿಗಳ ಸಸ್ಪೆಂಡ್ ಮಾಡಿದ್ದೆವೆ. ಓರ್ವ ಅಧಿಕಾರಿ ಅಮಾನತಿಗೆ ಡಿಪಿಎಆರ್ ಇಲಾಖೆಗೆ ಸೂಚನೆ ನೀಡಿದ್ದೆವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಭಿವೃದ್ದಿ ಹೆಸರಿನಲ್ಲಿ ಕಾಡು ನಾಶವಾಗುತ್ತಿರುವುದರಿಂದ ವನ್ಯ ಜೀವಿಗಳು ನಾಡಿಗೆ ಆಗಮಿಸುತ್ತಿವೆ. ಹುಲಿ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.
ನಮ್ಮಲ್ಲಿ ಕಾಡು ಬೆಳೆಸಲು, ಉಳಿಸಲು ನಾವು ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದೆವೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಡು ಬೆಳೆಸಲು ವನಮಹೋತ್ಸವ ಕಾರ್ಯಕ್ರಮದ ಮೂಲಕ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ. ಈ ಮೂಲಕ ಕಲ್ಯಾಣ ಕರ್ನಾಟಕದಲ್ಲಿನ ತಾಪಮಾನ ಕಡಿಮೆ ಮಾಡಲು ಅಲ್ಪ ಪ್ರಮಾಣದಲ್ಲಾದರೂ ನೆರವಾಗುತ್ತದೆ ಎಂದರು.