ಆದಾಯ ಪ್ರಮಾಣ ಪತ್ರ ಪಡೆಯಲು ಹೋದ ವ್ಯಕ್ತಿಗೆ ಶಾಕ್​: ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಜಾತಿಗೆ ಸೇರಿಸಿದ ಕಲಬುರಗಿ ಅಧಿಕಾರಿಗಳು

ಜಿಲ್ಲೆ

ಕಲಬುರಗಿ: ಕೆಲ ಸಂದರ್ಭಗಳಲ್ಲಿ ಪ್ರಮಾಣ ಪತ್ರದಲ್ಲಿ ಹೆಸರು, ವಿಳಾಸ ಅಥವಾ ಫೋಟೋ ಬದಲಾವಣೆ ಆಗಿರುವುದನ್ನು ನಾವು ನೋಡಿದ್ದೆವೆ. ಆದರೆ ಕಲಬುರಗಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ತಹಸೀಲ್ದಾರ್ ​ ಕಚೇರಿ ಅಧಿಕಾರಿಗಳ ಎಡವಟ್ಟಿನಿಂದ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಧರ್ಮಕ್ಕೆ ಸೇರಿಸಿ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ.

ತಪ್ಪು ಸರಿಪಡಿಸುವಂತೆ ಸೂಚಿಸಿದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲವೆಂದು ಆರೋಪ ಕೇಳಿಬಂದಿದೆ.

ಜಾತಿ ಕಾಲಂನಲ್ಲಿ ಮುಸ್ಲಿಂ ಅಂತಾ ಉಲ್ಲೇಖ
ಕಲಬುರಗಿಯ ರಾಮತೀರ್ಥ ನಗರದ ಮಹಾಂತಪ್ಪ ಕೊತ್ಲೆ ಎಂಬ ವ್ಯಕ್ತಿ ವೀರಶೈವ ಲಿಂಗಾಯತ ಸಮುದಾಯದವರು. ಇವರು ತಮ್ಮ ಪುತ್ರನ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆದು ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರಮಾಣ ಪತ್ರದ ಜಾತಿ ಕಾಲಂನಲ್ಲಿ ಮುಸ್ಲಿಂ ಅಂತಾ ಉಲ್ಲೇಖಿಸಿ ಅಧಿಕಾರಿಗಳು ವಿತರಿಸಿದ್ದಾರೆ.

ಆದಾಯ ಪ್ರಮಾಣ ಪತ್ರ ಪಡೆದು ನೋಡಿದ ಮಹಾಂತಪ್ಪ ನಿಜಕ್ಕೂ ಶಾಕ್ ಆಗಿದ್ದಾರೆ. ಸದ್ಯ ತಹಸೀಲ್ದಾರ್​ ಕಚೇರಿ ಅಧಿಕಾರಿಗಳ ಎಡವಟ್ಟಿನಿಂದ ಮಹಾಂತಪ್ಪ ಕೊತ್ಲೆ ಪುತ್ರನ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ, ಕುಟುಂಬ ಕಂಗಾಲಾಗಿದೆ.

ಜನರ ಪಾಲಿಗೆ ಜೀವಂತ: ದಾಖಲೆಗಳಲ್ಲಿ ಮರಣ
ಇನ್ನು ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಇಂತಹದ್ದೆ ಒಂದು ಘಟನೆ ನಡೆದಿತ್ತು. ಓರ್ವ ವ್ಯಕ್ತಿ ಸಮಾಜದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಆದರೆ ಸರ್ಕಾರದ ದಾಖಲೆಯಲ್ಲಿ ಈಗಾಗಲೇ ಮರಣ ಹೊಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಅವರು ಅಸುನೀಗಿದ್ದಾರೆ ಅಂತ ಹೇಳಿ ಅವರ ಮಕ್ಕಳ ಬದಲಾಗಿ ಇನ್ನಾರದ್ದೋ ಮಕ್ಕಳಿಗೆ ಜಮೀನನ್ನು ಕಂದಾಯ ಇಲಾಖೆ ಖಾತೆ ಮಾಡಿಕೊಟ್ಟಿತ್ತು. ಈ ಎಡವಟ್ಟಿನ ವಿರುದ್ಧ ವ್ಯಕ್ತಿಯ ಕುಟುಂಬ ಮತ್ತು ಊರಿನವರು ನಾಡ ಕಚೇರಿಗೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸಿದ್ದರು.

Leave a Reply

Your email address will not be published. Required fields are marked *