ಚಿತ್ತಾಪುರ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಭಾಗೋಡಿ ಗ್ರಾಮದಲ್ಲಿ ನಡೆದಿದೆ.
ತಿಪ್ಪಣ್ಣ ಅಲಿಯಾಸ್ ಕುಪೇಂದ್ರ (30) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಬಾರದು ಎಂದು ಶಾಂತಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ಕುಪೇಂದ್ರನನ್ನು ತಲೆದಿಂಬಿನಿಂದ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಶಾಂತಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಿಯಕರ ಪರಾರಿಯಾಗಿದ್ದಾನೆ, ಆತನನ್ನು ಆದಷ್ಟು ಬೇಗನೆ ಬಂಧಿಸಲಾಗುವುದು ಎಂದು ಪಿಎಸ್‌ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ.
ತಲೆದಿಂಬಿನಿಂದ ಮುಖವನ್ನು ಮುಚ್ಚಿ ಉಸಿರು ಗಟ್ಟಿಸುತ್ತಿರುವಾಗ ಕುಪೇಂದ್ರ ಜೋರಾಗಿ ಕಿರುಚಿದ್ದು, ಅಕ್ಕ ಪಕ್ಕದ ಮನೆಯವರು ಏನಾಗಿದೆ ಎಂದು ಮನೆಯ ಬಾಗಿಲ ಬಳಿ ಬಂದು ಬಾಗಿಲು ಬಡಿದರೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಕೂಡಲೇ 112ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದಾಗ ಕೊಲೆ ಮಾಡಿರುವ ತಿಳಿದು ಬಂದಿದೆ.
ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ಚಿತ್ತಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಸುದ್ದಿ ತಿಳಿದ ಕೂಡಲೇ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ನಟರಾಜ ಲಾಡೆ, ಚಂದ್ರಶೇಖರ ತಿಗಡಿ, ಎಎಸ್‌ಐ ಲಾಲ್ ಅಹ್ಮದ್, ಸಿಬ್ಬಂದಿಗಳಾದ ದತ್ತು ಜಾನೆ, ರವಿಕುಮಾರ, ಸವಿಕುಮಾರ, ಅನೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.